ಲೋಕಬಂಧು ನ್ಯೂಸ್, ಉಡುಪಿ
ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ 376ಕ್ಕೂ ಅಧಿಕ ಅಪಾರ್ಟ್‌ಮೆಂಟ್'ಗಳು ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದೇ ಮಳೆ ನೀರು ಹರಿಯುವ ತೋಡುಗಳಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ನೋಟಿಸ್ ನೀಡಲಾಗಿದೆ. ಅವುಗಳಲ್ಲಿ 200 ಮಣಿಪಾಲ, 105 ಉಡುಪಿ ನಗರ ಮತ್ತು 70 ಮಲ್ಪೆ ವ್ಯಾಪ್ತಿಯಲ್ಲಿದ್ದು ಸಮುಚ್ಚಯದ ಮಾಲೀಕರು ತ್ಯಾಜ್ಯ ನೀರನ್ನು ವೈಜ್ಞಾನಿಕ ನಿರ್ವಹಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಎಚ್ಚರಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಪಾರ್ಟ್‌ಮೆಂಟ್ ಮಾಲಕರ ಅಸೋಸಿಯೇಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುಮಹಡಿ ವಸತಿ ಸಮುಚ್ಚಯಗಳು ಕೊಳಚೆ ಹಾಗೂ ತ್ಯಾಜ್ಯ ನೀರನ್ನು ಶುದ್ಧೀಕರಿಸಿ, ಮರುಬಳಕೆ ಮಾಡಬೇಕು. ಒಂದೊಮ್ಮೆ ಕೊಳಚೆ ನೀರನ್ನು ಶುದ್ಧೀಕರಿಸದೆ ಎಲ್ಲೆಂದರಲ್ಲಿ ಹಾಗೂ ನದಿ- ತೋಡುಗಳಿಗೆ ಬಿಟ್ಟು ಜಲಮಾಲಿನ್ಯ ಉಂಟುಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭಾ ವ್ಯಾಪ್ತಿಯ ಕೆಲವು ಅಪಾರ್ಟ್‌ಮೆಂಟ್'ಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕಗಳಿವೆ. ಆದರೆ, ಅವು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೆಲವು ಅಪಾರ್ಟ್‌ಮೆಂಟ್'ಗಳಲ್ಲಿ ನಿರ್ವಹಣೆ ಘಟಕ ಇಲ್ಲದಿರುವುದು ಕಂಡುಬಂದಿದೆ. ಅಂಥ ಕಡೆಗಳಲ್ಲಿ ತ್ಯಾಜ್ಯ ನೀರು ನೇರವಾಗಿ ಜಲಮೂಲಗಳಿಗೆ ಸೇರಿ ಸಂಪೂರ್ಣ ಕಲ್ಮಷವಾಗುತ್ತದೆ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಗಾರ್ಡನ್ ಮತ್ತಿತರ ಕಡೆಗಳಲ್ಲಿ ಮರುಬಳಕೆಗೆ ಮುಂದಾಗಬೇಕು ಎಂದರು.
ನಗರ ವ್ಯಾಪ್ತಿಯ ಎಲ್ಲಾ ವಾರ್ಡ್'ಗಳ ಒಳಚರಂಡಿ ವ್ಯವಸ್ಥೆಗೆ ಈ ಹಿಂದೆ ಅಂದಾಜು 400 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ, ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ಸರಕಾರ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿನ ಭೂಪ್ರದೇಶ ಏರಿಳಿತದಿಂದ ಕೂಡಿರುವುದರಿಂದ ಹೆಚ್ಚಿನ ಅನುದಾನದ ಆವಶ್ಯಕತೆ ಇದೆ ಎಂದರು.
ಪ್ರಸ್ತುತ ತ್ಯಾಜ್ಯವನ್ನು ಕಡ್ಡಾಯವಾಗಿ ಸೇಫ್ಟಿ ಟ್ಯಾಂಕ್‌ಗಳ ಬಳಕೆಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಸಕ್ಕಿಂಗ್ ಯಂತ್ರಗಳ ಬಳಕೆಯೊಂದಿಗೆ ಘನತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು. ರಾತ್ರಿ ವೇಳೆ ತ್ಯಾಜ್ಯ ನೀರನ್ನು ನದಿ- ತೋಡುಗಳಿಗೆ ಬಿಡುತ್ತಿರುವ ದೂರುಗಳು ಕೇಳಿಬಂದಿವೆ. ಅದರಿಂದಾಗಿ ಕೆಲವು ಬಾವಿಗಳ ನೀರು ಕಲುಷಿತಗೊಂಡಿದ್ದು, ಹಾಗಾಗದಂತೆ ಎಚ್ಚರ ವಹಿಸಬೇಕು ಎಂದರು.
ನಗರ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಅನುಷ್ಠಾನ, ನಿರ್ವಹಣೆ ಹಾಗೂ ತ್ಯಾಜ್ಯ ನಿರ್ವಹಣೆ ಘಟಕ ಇಲ್ಲದಿರುವ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಸಮಗ್ರ ವಿವರಗಳ ಸರ್ವೇ ನಡೆಸಿ 20 ದಿನಗಳೊಳಗಾಗಿ ಮಾಹಿತಿ ನೀಡುವಂತೆ ನಗರಸಭೆ ಆಯುಕ್ತರು ಹಾಗೂ ಪ್ರಾದೇಶಿಕ ಪರಿಸರ ಅಧಿಕಾರಿಗೆ ಸೂಚಿಸಿದರು.
ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಪರಿಸರ ಅಧಿಕಾರಿ ಕೆ.ಕೀರ್ತಿ ಕುಮಾರ್, ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.