ಮಾದಕ ವ್ಯಸನ ದುಷ್ಪರಿಣಾಮ ಜಾಗೃತಿ

ಲೋಕಬಂಧು ನ್ಯೂಸ್, ಉಡುಪಿ
ಅಸೋಸಿಯೇಷನ್ ಆಫ್ ಫಿಸಿಷಿಯನ್ ಆಫ್ ಇಂಡಿಯಾ ಉಡುಪಿ- ಮಣಿಪಾಲ ಚಾಪ್ಟರ್ ವತಿಯಿಂದ ಗಾಂಧಿ ಆಸ್ಪತ್ರೆ ಉಡುಪಿ ಹಾಗೂ ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮವನ್ನು ಚಾಪ್ಟರ್ ಅಧ್ಯಕ್ಷ ಡಾ. ಸುರೇಶ್ ಹೆಗ್ಡೆ ಉದ್ಘಾಟಿಸಿದರು.
ಮಾದಕ ವ್ಯಸನಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಶ್ಚಂದ್ರ ಎಂ. ಅಭ್ಯಾಗತರಾಗಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ವೇದಿಕೆಯಲ್ಲಿದ್ದರು.


ಮಾದಕ ವ್ಯಸನದ ಆರಂಭ, ಆರಂಭಿಕ ಪರಿಣಾಮಗಳು, ತದನಂತರ ದೇಹಕ್ಕೆ ಆಗುವ ದುಷ್ಪರಿಣಾಮಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯೆ ಡಾ.ಸುಮಾ ಕೆ. ಮಾಹಿತಿ ನೀಡಿದರು. ಆರೋಗ್ಯಕರ ಅಭ್ಯಾಸಗಳಲ್ಲಿ ತೊಡಗುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.


ಈ ಸಂದರ್ಭದಲ್ಲಿ ಶಾಲಾ ಗ್ರಂಥಾಲಯಕ್ಕೆ ಡಾ.ಹರಿಶ್ಚಂದ್ರ ಅವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.


ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ವಂದಿಸಿದರು.