ಬೈಕ್ ರ್ಯಾಲಿ ಮೂಲಕ ಕ್ಯಾನ್ಸರ್ ಜಾಗೃತಿ

ಲೋಕಬಂಧು ನ್ಯೂಸ್, ಉಡುಪಿ
ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆ ನೇತೃತ್ವದಲ್ಲಿ ಮಣಿಪಾಲ ಆಟೋ ಕ್ಲಬ್, ಉಡುಪಿ ಜಾವಾ-ಎಝ್.ಡಿ. ಮೋಟಾರ್ ಸೈಕಲ್ ಕ್ಲಬ್, ರಾಯಲ್ ಎನ್'ಫೀಲ್ಡ್ ರೈಡರ್ಸ್ ಉಡುಪಿ ಹಾಗೂ ಆಭರಣ ಮೋಟಾರ್ಸ್ ಉಡುಪಿ ಸಹಯೋಗದೊಂದಿಗೆ ಫೆಬ್ರವರಿ 4ರಂದು ಬುಧವಾರ ಬೈಕ್ ರ್ಯಾಲಿ ಮೂಲಕ ಕ್ಯಾನ್ಸರ್ ಜಾಗೃತಿ ಮೂಡಿಸಲಾಯಿತು.
ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಜೀವನಕ್ಕಾಗಿ ಸವಾರಿ ಮಾಡುತ್ತೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭಗೊಂಡ ಬೈಕ್ ರ್ಯಾಲಿಗೆ ಮಣಿಪಾಲ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಚಾಲನೆ ನೀಡಿದರು.
ಜಾಗೃತಿ ಕಾರ್ಯಕ್ರಮವನ್ನು ಶ್ಲಾಘಿಸಿ, ಬೈಕ್ ಸವಾರರು ಹಾಗೂ ಆರೋಗ್ಯ ವೃತ್ತಿಪರರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರಶಂಸಿಸಿದರು. ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಶಿಸ್ತು, ಸುರಕ್ಷಿತ ವಾಹನ ಚಾಲನೆ ಹಾಗೂ ಸಮುದಾಯದ ಸಹಕಾರ ಅತ್ಯಂತ ಮಹತ್ವಪೂರ್ಣ ಎಂದರು.
ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್ ಜೋಸ್ ಕ್ಯಾನ್ಸರ್ ಚಿಕಿತ್ಸೆ, ತಡೆಗಟ್ಟುವಿಕೆ ಹಾಗೂ ಸಮುದಾಯದೊಂದಿಗೆ ಸಂಪರ್ಕ ಕಾರ್ಯಕ್ರಮಗಳ ಅಗತ್ಯತೆಯನ್ನು ಒತ್ತಿಹೇಳಿದರು. ಕ್ಯಾನ್ಸರ್ ಬಗೆಗೆ ತಿಳಿವಳಿಕೆ ಮತ್ತು ಆರಂಭಿಕ ಪತ್ತೆ ಮೂಲಕ ಕ್ಯಾನ್ಸರ್ ತಡೆ ಸಾಧ್ಯ ಎಂದರು.


ಮಣಿಪಾಲ ಕ್ಲಸ್ಟರ್ ಸಿಇಓ ಡಾ. ಸುಧಾಕರ್ ಕಂಟಿಪುಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು ಆ ಬಗ್ಗೆ ಜಾಗೃತಿ, ನಿಯಮಿತ ತಪಾಸಣೆ ಹಾಗೂ ಜೀವನ ಶೈಲಿ ಬದಲಾವಣೆ ಅಗತ್ಯತೆಯನ್ನು ಪ್ರತಿಪಾದಿಸಿದರು.


ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ದೇಹದ ಕೆಲವು ಕೋಶಗಳ ಅನಿಯಂತ್ರಿತ ಬೆಳವಣಿಗೆ ಮತ್ತು ದೇಹದ ಇತರ ಭಾಗಗಳಿಗೆ ಹರಡುವ ಸ್ಥಿತಿಯೇ ಕ್ಯಾನ್ಸರ್. ಜಾಗತಿಕವಾಗಿ ಮರಣದ ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್ ಕೂಡಾ ಒಂದು.


ತಂಬಾಕು ಸೇವನೆ, ದೀರ್ಘಕಾಲೀನ ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕ ಕೊರತೆ ಹಾಗೂ ವಾಯುಮಾಲಿನ್ಯಕ್ಕೆ ತುತ್ತಾಗುವುದು ಕ್ಯಾನ್ಸರ್‌ನ ಪ್ರಮುಖ ಕಾರಣಗಳು. ಜಾಗೃತಿ ಕೊರತೆ, ತಡವಾದ ರೋಗನಿರ್ಣಯ ಹಾಗೂ ದುಬಾರಿ ಚಿಕಿತ್ಸೆ ಇತ್ಯಾದಿ ಕ್ಯಾನ್ಸರ್ ವೃದ್ಧಿಗೆ ಕಾರಣವಾಗಿದ್ದು ಸೂಕ್ತ ಮಾಹಿತಿ, ಕ್ಯಾನ್ಸರ್ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಸಮಯೋಚಿತ ಚಿಕಿತ್ಸೆ ಮೂಲಕ ಕ್ಯಾನ್ಸರ್ ನಿಯಂತ್ರಣ ಸಾಧ್ಯ ಎಂದರು.


ಆಂಕೊಲಜಿ ವಿಭಾಗ ಮುಖ್ಯಸ್ಥ ಡಾ. ಅನಂತ ಪೈ ವಿಶ್ವ ಕ್ಯಾನ್ಸರ್ ದಿನದ ಮಹತ್ವದ ಕುರಿತು ಮಾಹಿತಿ ನೀಡಿ ಕ್ಯಾನ್ಸರ್ ಚಿಕಿತ್ಸೆಯ ಇತ್ತೀಚಿನ ಪ್ರಗತಿಗಳ ಬಗ್ಗೆ ವಿವರಿಸಿದರು.


ಬೈಕ್ ರ್ಯಾಲಿಯಲ್ಲಿ 100ಕ್ಕೂ ಹೆಚ್ಚು ಬೈಕ್ ಸವಾರರು ಭಾಗವಹಿಸಿದ್ದು, ಮಣಿಪಾಲದಿಂದ ಹೊರಟು ಉಡುಪಿಯ ಮುಖ್ಯ ರಸ್ತೆ ಮೂಲಕ ಸಾಗಿ ಕಿನ್ನಿಮುಲ್ಕಿ ಸ್ವಾಗತ ಗೋಪುರ ವರೆಗೆ ತೆರಳಿ ಮತ್ತೆ ಮಣಿಪಾಲಕ್ಕೆ ಆಗಮಿಸಲಾಯಿತು.