ಲೋಕಬಂಧು ನ್ಯೂಸ್, ಉಡುಪಿ
ಭಕ್ತಿ ಮತ್ತು ನಂಬಿಕೆ ಜೀವನಕ್ಕೆ ಸತ್ಪಥ ತೋರಿಸಬಲ್ಲುದು. ದೇವರ ಮೇಲಿನ ಭಕ್ತಿ ನಮ್ಮೊಳಗಿನ ಅಶಾಂತಿ, ಭಯಗಳನ್ನು ಉಪಶಮನಗೊಳಿಸಿ ಶಾಂತಿ ನೀಡುತ್ತದೆ. ನಂಬಿಕೆ ನಮ್ಮನ್ನು ಸಂಕಷ್ಟಗಳಲ್ಲಿ ಧೈರ್ಯದಿಂದ ಮುಂದೆ ನಡೆಯಲು ಶಕ್ತಿ ನೀಡಿ ಪ್ರಗತಿ ಹೊಂದಲು ಕಾರಣವಾಗುತ್ತದೆ ಎಂದು ಯಕ್ಷಗಾನ ಕಲಾರಂಗ ಉಪಾಧ್ಯಕ್ಷ ವಿ.ಜಿಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ವಾರ್ಷಿಕ ರಥೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಬಾಲ್ಯದಲ್ಲಿ ಹಿರಿಯರು ನೀಡಿದ ಒಳ್ಳೆಯ ಸಂಸ್ಕಾರಗಳೇ ಜೀವನಕ್ಕೆ ಭದ್ರ ಅಡಿಪಾಯ. ಮುಂದಿನ ಪೀಳಿಗೆಗೆ ನಾವು ಅದನ್ನೇ ಉಡುಗೊರೆಯಾಗಿ ನೀಡಬೇಕು ಎಂದರು.
ಶ್ರೀಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅಡಿಗ ಕೃಷ್ಣಮೂರ್ತಿ ಭಟ್, ಯು.ನರೇಂದ್ರ ಕಲ್ಮಾಡಿ, ಸದಾನಂದ ಸೇರಿಗಾರ್ ಮತ್ತು ಪೂರ್ಣಿಮಾ ಜನಾರ್ದನ್ ಅವರಿಗೆ 'ಶ್ರೀ ಶಂಕರನಾರಾಯಣಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಉದ್ಯಮಿ ಆನಂದ ಪಿ. ಸುವರ್ಣ, ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ತೋಟದಮನೆ ದಿವಾಕರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಉಷಾ ಆನಂದ ಸುವರ್ಣ, ಎ. ರಾಜ ಸೇರಿಗಾರ್, ವಾದಿರಾಜ ಸಾಲ್ಯಾನ್, ಯಶೋಧರ ಸಾಲ್ಯಾನ್ ಮತ್ತು ಬಾಬ ಕೆ. ಉಪಸ್ಥಿತರಿದ್ದರು.
ಶ್ರೀದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀ ಶಂಕರನಾರಾಯಣ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಕಾರ್ಯದರ್ಶಿ ಸತೀಶ್ ಕೊಡವೂರು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ತಂಡದ ಸದಸ್ಯರಿಂದ 'ನೃತ್ಯಸಿಂಚನ' ಸಂಪನ್ನಗೊಂಡಿತು.
.jpg)
.jpg)