ಲೋಕಬಂಧು ನ್ಯೂಸ್, ಉಡುಪಿ
ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನವಿರುತ್ತದೆ. ತಮ್ಮ ಸಮುದಾಯದ ಪಾರಂಪರಿಕ ಆಚರಣೆಗಳು, ಮೌಖಿಕ ಪರಂಪರೆ ಹಾಗೂ ಪ್ರದರ್ಶನ ಕಲೆಗಳು ಇತ್ಯಾದಿಗಳ ಪಠ್ಯ ಆಗಬೇಕು ಹಾಗೂ ಪ್ರತ್ಯೇಕ ಕರ್ನಾಟಕ ಬುಡಕಟ್ಟು ಅಕಾಡೆಮಿ ಸ್ಥಾಪನೆ ಆಗಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಸರ್ಕಾರವನ್ನು ಆಗ್ರಹಿಸಿದರು.ಮೇಕೆಕಟ್ಟು ನಂದಿಕೇಶ್ವರ ದೇವಳ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ವತಿಯಿಂದ ಶುಕ್ರವಾರ ನಡೆದ ವಿಶ್ವ ಬುಡಕಟ್ಟು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಜನಪದ ಹಾಗೂ ಬುಡಕಟ್ಟು ಕಲಾವಿದರ ಕುರಿತು ಉಡುಪಿ ಜಿಲ್ಲಾದ್ಯಂತ ಸಮೀಕ್ಷೆ ಕೈಗೊಳ್ಳಲಾಗುವುದು. ಸಂಘಟನೆಯ ದಶಮಾನೋತ್ಸವ ಅಂಗವಾಗಿ ಗ್ರಾಮ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದರು.
ಹಿರಿಯ ಕುಡುಬಿ ಹೋಳಿ ಕಲಾವಿದರಾದ ಶೀನ ನಾಯ್ಕ್ ಮಂಡಕರ ಹಾಗೂ ರಾಮಣ್ಣ ನಾಯ್ಕ್ ಅವರನ್ನು ಗೌರವಿಸಲಾಯಿತು.
ಕುಡುಬಿ ಸಮುದಾಯದ ನೃತ್ಯ ಹಾಗೂ ಕೋಲಾಟ ಏರ್ಪಡಿಸಲಾಗಿತ್ತು.
ದೇವಳದ ಟ್ರಸ್ಟಿ ರಾಜಾರಾಮ ಶೆಟ್ಟಿ, ಪ್ರತಾಪ್ ಶೆಟ್ಟಿ ಕೊಳ್ಕೆಬೈಲು, ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸದಾನಂದ ಮೊದಲಾದವರಿದ್ದರು.