ಸಾಮಾಜಿಕ ಸೇವೆಗೆ ವಿದಾಯ!

ಲೋಕಬಂಧು ನ್ಯೂಸ್, ಮಂಗಳೂರು
ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮನ ನೊಂದಿರುವ ಮುಂಬಯಿ ಉದ್ಯಮಿ ಹಾಗೂ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜ ಸೇವಾ ಚಟುವಟಿಕೆಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಜಾಗತಿಕ ಬಂಟರ ಸಂಘದ ಲೆಕ್ಕಪತ್ರ ಬಗ್ಗೆ ಕೇಳಿದ್ದಕ್ಕಾಗಿ ತನ್ನ ವಿರುದ್ಧ ತೇಜೋವಧೆ ನಡೆಸಲಾಗುತ್ತಿದೆ ಎಂದವರು ಆರೋಪಿಸಿದರು.


ಸಮಾಜ ಸೇವೆ ತಾನು ಮನಃಪೂರ್ವಕವಾಗಿ ಕೈಗೊಂಡ ಕಾರ್ಯವಾಗಿತ್ತು. ಬಡತನದಿಂದ ಹೊರಬಂದು ಉದ್ಯೋಗ ಹಾಗೂ ಉದ್ಯಮ ಕಟ್ಟಿಕೊಂಡ ತನ್ನ ಜೀವನದ ಪಯಣವನ್ನು ಸ್ಮರಿಸಿದ ಅವರು, ಆರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೆ. ಇದು ನನಗೆ ಆತ್ಮತೃಪ್ತಿ ನೀಡುತ್ತಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ನನ್ನ ನೆಮ್ಮದಿಯನ್ನು ಕಸಿದುಕೊಂಡಿವೆ ಎಂದು ನೋವು ತೋಡಿಕೊಂಡರು.


ದಾನಿಗೆ ಲೆಕ್ಕ ಕೇಳುವ ಹಕ್ಕಿಲ್ಲವೇ?
ದಾನ ನೀಡಿದವರಿಗೆ ಲೆಕ್ಕ ಕೇಳುವ ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದ ಅವರು, ಫೆ. 16ರಂದು ಮುಂಬಯಿನಲ್ಲಿ ಕರೆಯಲಾದ ಸಭೆ ಎಲ್ಲಾ ದಾನಿಗಳ ಒಪ್ಪಿಗೆಯೊಂದಿಗೆ ನಡೆದ ಸಭೆಯಾಗಿದೆ ಎಂದರು. ಆ ಸಭೆಗೆ ಸಂಬಂಧಿಸಿ ಜಾಹೀರಾತು ನೀಡಿ, ಲಾಯರ್ ನೋಟೀಸ್ ಕಳುಹಿಸಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತನ್ನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿ ಹೇಳಿಕೆಗಳು ಪ್ರಸಾರವಾಗುತ್ತಿದ್ದು, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂಬಂಧ ಈಗಾಗಲೇ ಕೇರಳದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.


ದೇಣಿಗೆ ವಾಗ್ದಾನ ಸ್ಥಗಿತ ಫೆ.14ರಿಂದ ಸಂಘಸಂಸ್ಥೆಗಳಿಗೆ ನೀಡುತ್ತಿದ್ದ ದೇಣಿಗೆ ವಾಗ್ದಾನ ಸ್ಥಗಿತಗೊಳಿಸಿರುವುದಾಗಿ ಅವರು ಘೋಷಿಸಿದರು. ಆದರೆ, ವೈಯಕ್ತಿಕವಾಗಿ ಆರೋಗ್ಯ ಹಾಗೂ ವೈದ್ಯಕೀಯ ನೆರವಿಗೆ ಸಂಬಂಧಿಸಿದ ಅರ್ಜಿ ಪರಿಶೀಲಿಸಿ ಸಹಾಯ ಮುಂದುವರಿಸುವುದಾಗಿ ಭರವಸೆ ನೀಡಿದರು.


ಸಮಾಜ ಸೇವೆಯಿಂದ ಹಿಂದೆ ಸರಿದರೂ, ಮಾನವೀಯ ಸೇವೆ ನನ್ನ ಜೀವನದ ಭಾಗವಾಗಿಯೇ ಮುಂದುವರಿಯಲಿದೆ ಎಂದವರು ಸ್ಪಷ್ಟಪಡಿಸಿದರು.