ಲೋಕಬಂಧು ನ್ಯೂಸ್, ಕಾರ್ಕಳ
ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಸ್ಪೋಟಕ ಬಳಸಿ ಕಲ್ಲು ಬಂಡೆಗಳನ್ನು ಒಡೆದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸರು ತಂದೆ–ಮಗನನ್ನು ಬಂಧಿಸಿದ್ದಾರೆ.ಜನವರಿ 21ರಂದು ಸಂಜೆ ಸುಮಾರು 5 ಗಂಟೆಗೆ ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಪ್ರದೇಶದಲ್ಲಿ ಕುಕ್ಕುಂದೂರು ಅಯ್ಯಪ್ಪ ನಗರ ನಿವಾಸಿ ಟಿ. ರವಿಚಂದ್ರ (55) ಮತ್ತು ಆತನ ಪುತ್ರ ಪವನ್ ಕುಮಾರ್ (31) ಎಂಬವರು ಪರವಾನಿಗೆ ಇಲ್ಲದೇ ಸ್ಪೋಟಕ ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಮುರಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.