ಮೀನುಗಾರ ಸಮುದ್ರಪಾಲು

ಲೋಕಬಂಧು ನ್ಯೂಸ್, ಬ್ರಹ್ಮಾವರ
ಮೀನುಗಾರಿಕೆ ಬೋಟ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀನುಗಾರ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆಯಲ್ಲಿ ಫೆಬ್ರವರಿ 4ರಂದು ಬುಧವಾರ ರಾತ್ರಿ ಸಂಭವಿಸಿದೆ. ಮಣೂರು ಗ್ರಾಮ ನಿವಾಸಿ ನಟರಾಜ್ (36) ಮೃತಪಟ್ಟ ದುರ್ದೈವಿ.
ಹಂಗಾರಕಟ್ಟೆ ಸಮೀಪ ನಿಲುಗಡೆಯಾಗಿದ್ದ ಈಶ್ವರಿ ಎಂಬ ಮೀನುಗಾರಿಕೆ ಬೋಟಿನಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಕೊಂಡಿದ್ದ ನಟರಾಜ್, ರಾತ್ರಿ ಊಟ ಮುಗಿಸಿ ಕೈ ತೊಳೆಯುವ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದಿದ್ದು,ತಕ್ಷಣ ಸಹಕಾರ್ಮಿಕರು ಆತನಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ.


ಗುರುವಾರ ಬೆಳಿಗ್ಗೆ ಬೋಟು ನಿಲುಗಡೆಗೊಳಿಸಿದ್ದ ಸ್ಥಳದ ಸಮೀಪವೇ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.


ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.