ಲೋಕಬಂಧು ನ್ಯೂಸ್, ಉಡುಪಿ
ಜನವಸತಿ ಇರುವ ಪ್ರದೇಶದಲ್ಲಿ ಬೀದಿ ನಾಯಿ ಆಶ್ರಯ ತಾಣ ನಿರ್ಮಿಸುವ ನಿರ್ಧಾರ ವಿವೇಚನಾರಹಿತ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ಬೀದಿ ನಾಯಿ ಆಶ್ರಯ ತಾಣ ನಿರ್ಮಿಸುವುದನ್ನು ವಿರೋಧಿಸಿ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಫೆಬ್ರವರಿ 6ರಂದು ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಸ್ತಾವಿತ ಯೋಜನೆಯ ಸುತ್ತಮುತ 99 ಎಕ್ರೆ ಪ್ರದೇಶ ಜನವಸತಿ ಹೊಂದಿದೆ. ಅಲ್ಲಿ ಆಶ್ರಯತಾಣ ನಿರ್ಮಿಸಿ ಅಂದಾಜು 17- 18 ಸಾವಿರ ಬೀದಿ ನಾಯಿಗಳನ್ನು ಬಿಡುವ ಮೂಲಕ ನೆಮ್ಮದಿಯಿಂದ ಬದುಕುವ ಜನರಿಗೆ ಸಂಕಷ್ಟ ತಂದೊಡ್ಡುವ ಪ್ರಯತ್ನ ಇದಾಗಿದೆ. ಅದು ಸರಿಯಲ್ಲ ಎಂದರು.
ಆಶ್ರಯತಾಣ ನಿರ್ಮಿಸಲು ಗುರುತಿಸಿರುವ ಸ್ಥಳ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 3 ಕಿ.ಮೀ. ಮತ್ತು ಮಣಿಪಾಲ ಭಾಗದಿಂದ 5 ಕಿ.ಮೀ. ದೂರದಲ್ಲಿದೆ. ಈ ಜಾಗದಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸಬೇಕು. ತಕ್ಷಣವೇ ಸರ್ಕಾರ ಈ ಬೀದಿ ನಾಯಿಗಳ ಆಶ್ರಯತಾಣ ನಿರ್ಮಾಣ ನಿರ್ಧಾರ ಕೈಬಿಡಬೇಕು. ಜನವಸತಿ ಇಲ್ಲದ ಪ್ರದೇಶಕ್ಕೆ ಅದನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಸತೀಶ್ ಪೂಜಾರಿ ಕೀಳಂಜೆ, ಕುಮಾರ್ ಬೈಕಾಡಿ, ಧರ್ಮಗುರು ಲಾರೆನ್ಸ್ ಡಿ'ಸೋಜ, ಭಾಸ್ಕರ ಶೆಟ್ಟಿ, ರಾಜು ಕುಲಾಲ್, ವೆರೊನಿಕಾ ಕರ್ನೇಲಿಯೊ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮೊದಲಾದವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಪ್ರತಿಭಟನೆಗೂ ಮುನ್ನ ಮಣಿಪಾಲದ ಕಾಯಿನ್ ಸರ್ಕಲ್'ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಪ್ರತಿಭಟನೆಕಾರರು ಮನವಿ ಸಲ್ಲಿಸಿದರು.