ವಂಟಮೂರಿ ಮಹಿಳೆ ವಿವಸ್ತ್ರಗೊಳಿಸಿದ ವಿಕೃತರಿಗೆ ಜೈಲು ಶಿಕ್ಷೆ

ಲೋಕಬಂಧು ನ್ಯೂಸ್, ಬೆಳಗಾವಿ
ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 4ರಂದು ಬುಧವಾರ ಇಲ್ಲಿನ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ಮಂದಿ ಮಹಿಳೆಯರೂ ಸೇರಿದಂತೆ 12 ಮಂದಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.2023ರ ಡಿಸೆಂಬರ್ 11ರಂದು ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಜನರ ಗುಂಪೊಂದು ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ ಅಮಾನವೀಯ ಘಟನೆ ನಡೆದಿತ್ತು.


ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಸ್. ಮಂಜುನಾಥ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 12 ಸೆಕ್ಷನ್‌ಗಳಡಿ ಆರೋಪ ಸಾಬೀತಾಗಿದ್ದು, ಪ್ರತಿಯೊಂದು ಸೆಕ್ಷನ್‌ಗೆ ಒಂದೊಂದು ಸಾವಿರ ರೂ. ದಂಡವನ್ನೂ ವಿಧಿಸಲಾಗಿದೆ.


ಅಪರಾಧಿಗಳಾದ ಬಸಪ್ಪ ನಾಯಕ, ರಾಜು ನಾಯಕ, ಕೆಂಪಣ್ಣ ನಾಯಕ, ಪಾರ್ವತಿ ನಾಯಕ, ಯಲ್ಲವ್ವ ನಾಯಕ, ಲಕ್ಕಪ್ಪ ನಾಯಕ, ಗಂಗವ್ವ ನಾಯಕ, ಸಂಗೀತಾ ಹೆಗ್ಗನಾಯಕ, ಸಂತೋಷ ನಾಯಕ, ಶೋಭಾ ನಾಯಕ, ಲಕ್ಕವ್ವ ನಾಯಕ ಹಾಗೂ ಶಿವಪ್ಪ ವನ್ನೂರು ಶಿಕ್ಷೆ ವಿಧಿಸಲ್ಪಟ್ಟವರು.


ಪ್ರಾಸಿಕ್ಯೂಷನ್ ಪ್ರಕಾರ ಆರೋಪಿಗಳು ಬಲವಂತವಾಗಿ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ, ಆಕೆಯ ಮಂಗಳಸೂತ್ರ ಕಿತ್ತು ಬೀದಿಗೆಸೆದಿದ್ದರು.


ಹೊಸ ವಂಟಮೂರಿ ಗ್ರಾಮದ ಯುವತಿ ಮತ್ತು ಯುವಕ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವತಿಯ ಮನೆಯವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಹುಡುಗಿಯ ಮನೆಯವರು 2023ರ ಡಿಸೆಂಬರ್ 12ರಂದು ಹುಡುಗಿಗೆ ಇನ್ನೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ನಿಗದಿಪಡಿಸಿದ್ದರು. ಅದನ್ನು ತಿಳಿದ ನಂತರ ಹುಡುಗಿ ತಾನು ಪ್ರೀತಿಸುತ್ತಿದ್ದ ಹುಡುಗನ ಜೊತೆ ಹಿಂದಿನ ರಾತ್ರಿ ಓಡಿಹೋಗಿದ್ದಳು.


ಈ ವಿಷಯ ತಿಳಿದು ಕೋಪಗೊಂಡ ಹುಡುಗಿಯ ಪೋಷಕರು ಹುಡುಗನ ಮನೆಗೆ ತೆರಳಿ ಅವರ ಮನೆಯನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ಯುವತಿಯ ತಾಯಿಯನ್ನು ಥಳಿಸಿ, ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕುವ ಮೂಲಕ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ್ದರು.