ಲೋಕಬಂಧು ನ್ಯೂಸ್, ಉಡುಪಿ
ಮಾನವನಿಗೆ ಮೊದಲ ಉಸಿರಿನಿಂದ ಕೊನೆಯ ಉಸಿರು ಇರುವ ವರೆಗೆ ಫಿಸಿಯೋಥೆರಪಿ ಚಿಕಿತ್ಸೆಯ ಆವಶ್ಯಕತೆ ಇದೆ. ಮನುಷ್ಯ ಎಷ್ಟು ವರ್ಷ ಬದುಕಿದ್ದೇನೆ ಎನ್ನುವುದುಕಿಂತ ಎಷ್ಟು ವರ್ಷ ಆರೋಗ್ಯವಂತನಾಗಿ ಬದುಕಿದ್ದೇನೆ ಎನ್ನುವುದು ಬಹಳ ಮುಖ್ಯ. ಸುಸ್ಥಿರ ಆರೋಗ್ಯ ಜೀವನಕ್ಕೆ ಫಿಸಿಯೋಥೆರಪಿ ಅಗತ್ಯ ಎಂದು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಸೈನ್ಸ್ ಡೀನ್ ಡಾ.ಅರುಣ್ ಮಯ್ಯ ಹೇಳಿದರು.ನಗರದ ನೇತ್ರಜ್ಯೋತಿ ಕಾಲೇಜಿನಲ್ಲಿ ಫೆಬ್ರವರಿ 6ರಂದು ಶುಕ್ರವಾರ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.
ಅಭ್ಯಾಗತರಾಗಿದ್ದ ಉದ್ಯಮಿ ಪುರುಷೋತ್ತಮ ಶೆಟ್ಟಿ ಶುಭ ಹಾರೈಸಿದರು.
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಬದಲಾದ ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಗಿಂತ ಫಿಸಿಯೊಥೆರಪಿಯಂಥ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಎಂದರು.
ಡಾ.ಕೃಷ್ಣಪ್ರಸಾದ್ ಕೂಡ್ಲು ಅವರ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ನೇತ್ರಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ವೈದ್ಯಕೀಯ ಕ್ಷೇತ್ರ ಪರಿಪೂರ್ಣತೆ ಪಡೆಯಬೇಕಾದರೆ ಅರೆವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ ಎಂದರು.
ವಿದ್ಯಾರ್ಥಿಗಳಿಗೆ ಮತ್ತು ಊರಿನ ಜನರಿಗಾಗಿ ಇಂಥ ಸುಸಜ್ಜಿತ ಫಿಸಿಯೋಥೆರಪಿ ಕ್ಲಿನಿಕ್ ಪ್ರಾರಂಭಿಸಲಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅದರ ಉಪಯೋಗ ಪಡೆಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೇತ್ರಜ್ಯೋತಿ ಕಾಲೇಜಿನ ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್, ಯಾಂತ್ರೀಕೃತ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಜನರನ್ನು ಕಾಡುತ್ತಿದೆ. ನೇತ್ರಜ್ಯೋತಿ ಕಾಲೇಜಿನಲ್ಲಿ ಅನೇಕ ವೈದ್ಯಕೀಯ ಕೋರ್ಸ್'ಗಳ ಜೊತೆಗೆ ಫಿಸಿಯೋಥೆರಪಿ ಕಾಲೇಜು ಸ್ಥಾಪಿಸಿದ್ದು ಅದಕ್ಕೆ ಪೂರಕವಾಗುವಂತೆ ಫಿಸಿಯೋಥೆರಪಿ ಕ್ಲಿನಿಕ್ ಪ್ರಾರಂಭಿಸಲಾಗಿದೆ ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗೌರಿ ಪ್ರಭು. ನೇತ್ರಜ್ಯೋತಿ ಫಿಸಿಯೋಥೆರಪಿ ಕ್ಲಿನಿಕ್'ನಲ್ಲಿ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು. ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ರಘುರಾಮ್ ರಾವ್ ಉಪಸ್ಥಿತರಿದ್ದರು.
ಕಾಲೇಜಿನ ಕಾರ್ಡಿನೇಟರ್ ಮಾಧವ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕಿಯರಾದ ಶ್ರುತಿ ನಿರೂಪಿಸಿ, ಶ್ರಾವ್ಯ ವಂದಿಸಿದರು.