ಲೋಕಬಂಧು ನ್ಯೂಸ್, ಬೆಂಗಳೂರು
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ವಿಬಿ-ಜಿ ರಾಮ್ ಜಿ ಕಾಯ್ದೆ ತಕ್ಷಣ ರದ್ದುಗೊಳಿಸುವಂತೆ ಮತ್ತು ಯುಪಿಎ ಯುಗದ ಮನರೇಗಾವನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧದ ನಡುವೆಯೂ ಫೆಬ್ರವರಿ 4ರಂದು ಬುಧವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ಕರ್ನಾಟಕದ ಗ್ರಾಮೀಣ ಜನರ ಬದುಕುವ ಹಕ್ಕನ್ನು ರಕ್ಷಿಸುವ ದೃಷ್ಟಿಯಿಂದ ಈ ಸದನ ಕೇಂದ್ರ ಸರ್ಕಾರವನ್ನು ತಕ್ಷಣವೇ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಗ್ರಾಮ್-ಜಿ) ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸುತ್ತದೆ ಎಂದು ಸಿಎಂ ಹೇಳಿದ್ದರು.
ವಿಬಿ-ಜಿ ರಾಮ್ ಜಿ ಕಾಯ್ದೆ ಫೆಡರಲ್ ತತ್ವಕ್ಕೆ ವಿರುದ್ಧವಾಗಿದೆ. ರಾಜ್ಯ ಖಜಾನೆಗೆ ತೀವ್ರ ಹೊರೆಯಾಗಿದೆ ಮತ್ತು ವಿಕೇಂದ್ರೀಕರಣದ ತತ್ವಕ್ಕೆ ವಿರುದ್ಧವಾಗಿದೆ. ಗ್ರಾಮ ಪಂಚಾಯತ್‌ಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದುಕೊಂಡಿದೆ. ಹಾಗಾಗಿ ಈ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಸಿಎಂ ಆಗ್ರಹಿಸಿದರು.
ವಿಪಕ್ಷಗಳ ಸಭಾತ್ಯಾಗ
ವಿಧಾನಸಭೆಯಲ್ಲಿ ಈ ನಿರ್ಣಯದ ಮೇಲೆ ಚರ್ಚೆ ಮುಂದುವರಿಯಿತು. ಆದರೆ, ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಆಡಳಿತಾರೂಢ ಕಾಂಗ್ರೆಸ್ ಮಂಡಿಸಿದ ನಿರ್ಣಯವನ್ನು ಬಿಜೆಪಿ ವಿರೋಧಿಸುತ್ತದೆ ಮತ್ತು ವಿಬಿ-ಜಿ ರಾಮ್ ಜಿನ್ನು ಬೆಂಬಲಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ.ಗಳಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದರಿಂದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂಬ ತಮ್ಮ ಪಕ್ಷದ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.
ಸಚಿವ ತಿಮ್ಮಾಪುರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆಯೊಳಗೆ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿತ್ತು ಮತ್ತು ಅದು ಬುಧವಾರವೂ ಮುಂದುವರಿಯಿತು.
ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲೇ ವಿಬಿ-ಜಿ ರಾಮ್ ಜಿ ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಅಲ್ಲದೆ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

