ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳ ಗಡಣ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣ

ಲೋಕಬಂಧು ನ್ಯೂಸ್, ಉಜಿರೆ
ನಾಡಿನ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಫೆಬ್ರವರಿ 15ರಂದು ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಲಿದ್ದು ಅವರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ.ಸುಮಾರು 50 ಸಾವಿರಕ್ಕೂ ಅಧಿಕ ಪಾದಯಾತ್ರಿಗಳು ಬರುವುದಾಗಿ ಈಗಾಗಲೇ ಖಚಿತಪಡಿಸಿದ್ದು, ಅವರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ.


ಧರ್ಮಸ್ಥಳದಲ್ಲಿ ಸಾಕೇತ, ಗಂಗೋತ್ರಿ, ಎಸ್.ಡಿ.ಎಂ. ಹೈಸ್ಕೂಲ್, ಅಮೃತವರ್ಷಿಣಿ ಸಭಾಭವನ ಹಾಗೂ ಉಜಿರೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ರಾಂತಿ ಹಾಗೂ ಉಜಿರೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ರಾಂತಿ ಹಾಗೂ ವಸತಿಗೆ ಸೌಲಭ್ಯ ಕಲ್ಪಿಸಲಾಗಿದೆ.


ಧರ್ಮಸ್ಥಳದ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತ ಕಾರ್ಯಾಲಯ ತೆರೆಯಲಾಗಿದ್ದು ಮಾಹಿತಿ ಕೇಂದ್ರ, ಉಚಿತ ವೈದ್ಯಕೀಯ ಚಿಕಿತ್ಸೆ, ಪಾನೀಯ ವಿತರಣೆ, ಪೊಲೀಸ್ ಚೌಕಿ, ಅಂಬ್ಯುಲೆನ್ಸ್ ಸೇವೆ ಲಭ್ಯವಿದೆ. ಪಾದಯಾತ್ರೆಯಲ್ಲಿ  ಬಂದವರನ್ನು ಅಲ್ಲಿ ಹಾರಹಾಕಿ ಗೌರವದಿಂದ ಬರಮಾಡಿಕೊಳ್ಳಲಾಗುವುದು.


ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಬೂಡುಜಾಲು ಮೊದಲಾದ ಕಡೆಗಳಲ್ಲಿ ಪಾದಯಾತ್ರಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.


ಸ್ವಚ್ಛತೆಯೊಂದಿಗೆ ನಿರಂತರ ನೀರು ಸರಬರಾಜು ಹಾಗೂ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.‌ ಬೆಂಗಳೂರಿನ ಡಾ. ಪಂಚಾಕ್ಷರಿ ನೇತೃತ್ವದಲ್ಲಿ ವೈದ್ಯರು ಪ್ರತಿವರ್ಷದಂತೆ ಧರ್ಮಸ್ಥಳದಲ್ಲಿ ಉಚಿತ ಚಿಕಿತ್ಸೆ ನೀಡುವರು.


ಪಾದಯಾತ್ರಿಗಳು ತಂಗುವ ಸ್ಥಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಧಾರ್ಮಿಕ ಉಪನ್ಯಾಸ, ಭಜನೆ ಹಾಗೂ ಸತ್ಸಂಗ ಮೊದಲಾದ ಧರ್ಮ ಪ್ರಭಾವನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ವೈವಿಧ್ಯಮಯ ಸೇವೆ
ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಭಕ್ತಾದಿಗಳು ದೇವರ ದರ್ಶನ ಮಾಡಿ ಶ್ರದ್ಧಾಭಕ್ತಿಯಿಂದ ಎಳನೀರಿನ ಅಭಿಷೇಕ ಹಾಗೂ ಶತರುದ್ರಾಭಿಷೇಕ ಸೇವೆ ಅರ್ಪಿಸುವರು.


ಭಕ್ತರು ಅಹೋರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಹಾಗೂ ಉಪವಾಸ ವ್ರತಾಚರಣೆ ಮಾಡುವರು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಾನುವಾರ ಸಂಜೆ 6 ಗಂಟೆಗೆ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡುವರು. ಬಳಿಕ ಅಹೋರಾತ್ರಿ ಭಕ್ತರಿಂದ ಶಿವಪಂಚಾಕ್ಷರಿ ಪಠಣ ನಡೆಯಲಿದೆ.


ಭಾನುವಾರ ರಾತ್ರಿ ಅನ್ನಪೂರ್ಣ ಭೋಜನಾಲಯದ ಹಿಂಬದಿ ಇರುವ ಮೈದಾನದಲ್ಲಿ ಹಾಗೂ ಪ್ರೌಢಶಾಲಾ ಕ್ರೀಡಾಂಗಣದಲ್ಲಿ  ಬೆಂಗಳೂರಿನ ಭಕ್ತರು ಉಚಿತ ಅನ್ನದಾಸೋಹ ಸೇವೆ ಮಾಡುವರು.


ಕಲಾಸೇವೆ
ನಾಡಿನೆಲ್ಲೆಡೆಯಿಂದ ಆಗಮಿಸುವ ಸುಮಾರು ಎರಡು ಸಾವಿರ ಕಲಾವಿದರು ವಾಲಗ, ಕೊಳಲು, ಶಂಖ, ಜಾಗಟೆ, ಚೆಂಡೆ ವಾದನ ಮೊದಲಾದ ಕಲಾಸೇವೆ ಅರ್ಪಿಸುವರು.


ಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ಕೆಎಸ್ಆರ್.ಟಿಸಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.