ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಶುಕ್ರವಾರ ವಿವಿಧ ಇಲಾಖೆಗಳು ಹಾಗೂ ಸ್ಥಳಗಳಿಗೆ ದಿಢೀರ್ ದಾಳಿ ನಡೆಸಿದರು. ಅವರು ಹೋದಲ್ಲೆಲ್ಲ ಅವ್ಯವಸ್ಥೆ ಪರಮಾವಧಿ ತಲುಪಿತ್ತು.ನಿಟ್ಟೂರಿನ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶುದ್ಧೀಕರಣ ಘಟಕ (ಎಸ್.ಟಿ.ಪಿ)ದ ನಿರ್ವಹಣೆಗೆ ಪ್ರತೀ ತಿಂಗಳು ಸುಮಾರು 3 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡುತ್ತಿದ್ದರೂ ನಿರ್ವಹಣೆ ವ್ಯವಸ್ಥಿತವಾಗಿಲ್ಲದಿರುವುದು, ಘಟಕ ಹೊಸೂಸುವ ದುರ್ವಾಸನೆ, ಕಳಪೆ ಶುದ್ಧೀಕರಣ ಹಾಗೂ ಪೂರ್ಣ ಪ್ರಮಾಣದಲ್ಲಿ ಶುದ್ಧವಾಗದ ನೀರನ್ನು ಸಮುದ್ರಕ್ಕೆ ಬಿಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನ್ಯೂನತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಸೂಚಿಸಿದರು.
ಘಟಕ ಆರು ಹಂತಗಳಲ್ಲಿ ಶುದ್ಧೀಕರಣಗೊಂಡಿದೆ ಎಂದು ಹೇಳಲಾಗುತ್ತಿದ್ದರೂ ಘಟಕದಿಂದ ಕಪ್ಪುಬಣ್ಣದ ನೀರು ಹೊರಬರುತ್ತಿರುವುದನ್ನು ಗಮನಿಸಿದ ಅವರು ಪರಿಸ್ಥಿತಿಯನ್ನು ಗಂಭೀರ ಎಂದು ಅಭಿಪ್ರಾಯಪಟ್ಟರು. ಆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧಿಕಾರಿ ಕೀರ್ತಿ ಕುಮಾರ್ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
2010ರಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆ.ಯು.ಐ.ಡಿ.ಎಫ್.ಸಿ) ಮೂಲಕ ಸ್ಥಾಪಿಸಲ್ಪಟ್ಟ ಈ ಘಟಕವನ್ನು 30 ಕೋಟಿ ರೂ. ವೆಚ್ಚದಲ್ಲಿ ಮರಿದಿಗೇರಿಸಲು ಯೋಜಿಸಲಾಗಿದೆ. ಅನುದಾನ ಮಂಜೂರಾದರೂ ಮೇಲ್ದರ್ಜೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಆದರೆ, ನಗರಸಭೆ ಅಧಿಕಾರಿಗಳು ಆರಂಭಿಕ ಕಾರ್ಯ ಶುರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಧಿಕಾರಿಗಳ ಅಸ್ಪಷ್ಟ ಮಾಹಿತಿ ಮತ್ತು ಸಮನ್ವಯದ ಕೊರತೆ ಉಪ ಲೋಕಾಯುಕ್ತರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು.
ಸಮರ್ಪಕವಾಗಿ ಶುದ್ಧೀಕರಿಸದ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದ್ದು, ಅಲ್ಲಿನ ಜಲಚರಗಳು ಮಲಿನ ನೀರಿನಲ್ಲಿರುವ ರಾಸಾಯನಿಕಗಳನ್ನು ಸೇವಿಸುವಂತಾಗಿದೆ. ಸಮುದ್ರ ಆಹಾರ ಉತ್ಪನ್ನಗಳು ಜನರು ಸೇವಿಸುತ್ತಿದ್ದಾರೆ. ಇದು ಪರೋಕ್ಷವಾಗಿ ಜನರಿಗೆ ವಿಷ ಉಣಿಸಿದಂತೆ ಎಂದ ಅವರು, ಸುಮಾರು 18 ಜಿಲ್ಲೆಗಳ ಎಸ್.ಟಿ.ಪಿ.ಗಳನ್ನು ಪರಿಶೀಲಿಸಿದ್ದರೂ ಉಡುಪಿಯಷ್ಟು ಕಳಪೆ ಸ್ಥಿತಿ ಎಲ್ಲಿಯೂ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಲ್ಪೆ ಕಡೆಗೆ ತೆರಳುವ ವೇಳೆ ಇಂದ್ರಾಣಿ ನದಿಯ ಮಾಲಿನ್ಯದಿಂದ ಬಳಲುತ್ತಿರುವ ನಿವಾಸಿಗಳ ಸ್ಥಿತಿಯನ್ನೂ ಪರಿಶೀಲಿಸಿದರು. ಸ್ಥಳೀಯ ನಿವಾಸಿ ಇಂದಿರಾ, ಹಲವಾರು ವರ್ಷಗಳಿಂದ ನಾವು ಬಾವಿ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಹಿಂದೆ ಸ್ನಾನಕ್ಕೂ ಬಳಸುತ್ತಿದ್ದೆವು. ಈಗ ನೀರು ರಾಸಾಯನಿಕಗಳಿಂದ ತುಂಬಿರುವುದರಿಂದ ಮೀನುಗಳೂ ಬದುಕುತ್ತಿಲ್ಲ, ದುರ್ವಾಸನೆಯಿಂದ ಅನೇಕರು ಆಸ್ತಮಾ ಮತ್ತು ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದಾರೆ. ನಗರಸಭೆ ಕುಡಿಯುವ ನೀರನ್ನು ಪೈಪ್ ಮೂಲಕ ಪೂರೈಸುತ್ತಿರುವುದರಿಂದ ನಾವು ಬದುಕುತ್ತಿದ್ದೇವೆ. ಸಂಜೆ ವೇಳೆಯಲ್ಲಿ ದುರ್ವಾಸನೆ ತಾಳಲಾರದ ಕಾರಣ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತೇವೆ ಎಂದರು. ಇಂಥ ನಿರ್ಲಕ್ಷ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾ.ವೀರಪ್ಪ ಎಚ್ಚರಿಕೆ ನೀಡಿದರು.
ಇಂದ್ರಾಣಿ ನದಿಯ ನೀರು ಅರಬ್ಬಿ ಸಮುದ್ರ ಸೇರುವ ಅಳಿವೆ ಪ್ರದೇಶ ವೀಕ್ಷಿಸಲು ಹೊರಟಾಗ ನದಿ ದಡದಲ್ಲಿ ಗಿಡಗಂಟಿಗಳು, ಅನುಪಯುಕ್ತ ವಸ್ತುಗಳು, ಎಲ್ಲೆಂದರಲ್ಲಿ ಬಿಸಾಕಿರುವ ಕಸಕಡ್ಡಿಗಳ ರಾಶಿ, ಸತ್ತ ನಾಯಿ ಇರುವುದನ್ನು ನೋಡಿ, ಬೇಸರ ವ್ಯಕ್ತಪಡಿಸಿದ ನ್ಯಾ.ಶಿವಪ್ಪ, ಬಂದರು ಹಾಗೂ ಸಿ.ಆರ್.ಝಡ್ ಅಧಿಕಾರಿಗಳಿಗೆ ಕೂಡಲೇ ಅವುಗಳನ್ನು ಸ್ವಚ್ಛಗೊಳಿಸುವುದರೊಂದಿಗೆ ವ್ಯವಸ್ಥಿತ ನಿರ್ವಹಣೆಗೆ ಸೂಚಿಸಿದರು. ಮಲಿನ ನೀರು ಸಮುದ್ರಕ್ಕೆ ಬಿಡುತ್ತಿದ್ದರೂ ಮೌನವಹಿಸಿ, ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಲು ಸೂಚಿಸಿದರು.
ಬನ್ನಂಜೆಯ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿರುವ ಸಿದ್ಧ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ತಯಾರಾದ ದಿನಾಂಕ ಮತ್ತು ಅವಧಿ ಮುಗಿದ ದಿನಾಂಕಗಳ ಪರಿಶೀಲನೆ ನಡೆಸಿದರು. ಅಲ್ಲಿನ ಹೋಟೆಲ್‌ನ ಅಡುಗೆ ಕೋಣೆಗೆ ಭೇಟಿ ನೀಡಿ ಶುದ್ಧತೆ ಹಾಗೂ ಆಹಾರ ತಯಾರಿಕೆ ಬಗ್ಗೆ ವೀಕ್ಷಿಸಿ ಗುಣಮಟ್ಟದ ಆಹಾರ ನೀಡುವಂತೆ ಹೋಟೆಲ್ ಮಾಲಕರಿಗೆ ತಿಳಿಸಿದರು.
ಸ್ವಚ್ಛತೆಗೆ ಆದ್ಯತೆ ನೀಡಬೇಕು, ತಿಂಡಿ-ತಿನಿಸುಗಳ ದರಪಟ್ಟಿ ಪ್ರದರ್ಶಿಸಬೇಕು ಎಂದ ಅವರು, ಜಿಲ್ಲಾ ಆಹಾರ ಅಂಕಿತ ಅಧಿಕಾರಿಗಳು ಪರಿಶೀಲಿಸಲು ಸೂಚನೆ ನೀಡಿ, ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ವಿಲೇವಾರಿಯನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಡಬೇಕು. ಕಸ ಸಂಗ್ರಹಣೆಯ ಡಬ್ಬಿಗಳಿಗೆ ಮುಚ್ಚಳ ಅಳವಡಿಸಲು ಸೂಚಿಸಿದರು. ಬಸ್ ನಿಲ್ದಾಣ ಸ್ವಚ್ಛತೆ ಕಾರ್ಯ ನಿರ್ವಹಿಸುವ ಗುತ್ತಿಗೆದಾರ ನೌಕರರಿಗೆ ಗುರುತಿನ ಚೀಟಿ ನೀಡಬೇಕು. ಅವರಿಗೆ ನಿಗದಿತ ಸಂಬಳವನ್ನು ಸಕಾಲದಲ್ಲಿ ಗುತ್ತಿಗೆದಾರರು ನೀಡುತ್ತಿರುವ ಬಗ್ಗೆ ಪರಿಶೀಲಿಸಬೇಕು. ವಿಮೆ ಆಧರಿತ ವೈದ್ಯಕೀಯ ಸೌಲಭ್ಯಗಳು ದೊರಕುವಂತಾಗಬೇಕು. ಶೌಚಾಲಯಗಳ ಬಳಕೆ ಶುಲ್ಕ ಪಾವತಿಸಲು ಕ್ಯೂಆರ್ ಕೋಡ್ನ್ನು ತಪ್ಪದೇ ಅಳವಡಿಸಲು ಸೂಚನೆ ನೀಡಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡರು.
ತಾಲೂಕು ಕಚೇರಿಯಲ್ಲಿ ಬಡ್ಡಿ ವ್ಯವಹಾರ!
ಉಡುಪಿ ತಾಲೂಕು ಕಚೇರಿಗೆ ಭೇಟಿ ನೀಡಿ ತಾಲೂಕು ಕಚೇರಿಯ ಆಡಳಿತ ವಿಭಾಗ, ಟಪ್ಪಾಲು ವಿಭಾಗ, ಭೂಮಿ ಕೇಂದ್ರ, ಅಜರ್ಿ ಸ್ವೀಕಾರ ಇತ್ಯಾದಿಗಳಿಗೆ ಭೇಟಿ ನೀಡಿ, ಕಡತಗಳು ಹಾಗೂ ರಿಜಿಸ್ಟರ್ಗಳನ್ನು ಪರಿಶೀಲಿಸಿದಾಗ ನ್ಯೂನತೆ ಕಂಡುಬಂದ ಹಿನ್ನೆಲೆ ಹಾಗೂ ಸಮವಸ್ತ್ರಗಳನ್ನು ಧರಿಸದಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡರು. ಅಲ್ಲಿನ ಕೆಲವು ಸಿಬಂದಿಗಳು ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಬಗ್ಗೆ ದಾಖಲೆ ಸಮೇತ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದರು.
ತಾಲೂಕು ಭೂ ದಾಖಲೆಗಳ ಕಚೇರಿಗೆ ಭೇಟಿ ನೀಡಿ ಅಲ್ಲಿನ ದಾಖಲೆಗಳನ್ನು ಪರಿಶೀಲಿಸಿ 1,500ಕ್ಕೂ ಹೆಚ್ಚು 11ಎ, ತತ್ಕಾಲ್ ಪೋಡಿ ಮತ್ತಿತರ ಅಳತೆ ಅಜರ್ಿಗಳು ಬಾಕಿ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಗಳು ಉಂಟಾಗುತ್ತಿವೆ. ಮುಂದಿನ ಮೂರು ತಿಂಗಳ ಒಳಗಾಗಿ ಅವುಗಳ ಪೂರ್ಣ ಪ್ರಮಾಣದ ವಿಲೇವಾರಿ ಮಾಡಬೇಕು. ಕಳೆದ 7 ವರ್ಷಗಳಿಂದ ನಿವೃತ್ತ ಸೈನಿಕನ ಜಮೀನಿನ ಅಳತೆ ಮಾಡದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಒಂದು ವಾರದೊಳಗಾಗಿ ಮಾಡಿಕೊಡುವಂತೆ ತಿಳಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.
ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದರು. ಗುತ್ತಿಗೆ ನೌಕರರು ತಮ್ಮ ಸ್ವಂತ ಬ್ಯಾಗ್ ನಲ್ಲಿ ಅನೇಕ ಖಾಸಗಿ ದಾಖಲೆಗಳನ್ನು ಹೊಂದಿರುವುದನ್ನು ಕಂಡು, ಸೂಕ್ತ ವಿವರ ನೀಡದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದರು.
ಜಿಲ್ಲಾಸ್ಪತ್ರೆಯ ಔಷಧಿ ವಿತರಣಾ ಕೇಂದ್ರ, ನೋಂದಣಿ ಕೇಂದ್ರ, ಮಹಿಳಾ ವಾಡರ್್, ಪ್ರಯೋಗಾಲಯ, ರಕ್ತನಿಧಿ ಕೇಂದ್ರ, ಆಸ್ಪತ್ರೆಯ ಆಡಳಿತ ವಿಭಾಗಕ್ಕೆ ಭೇಟಿ ನೀಡಿ, ಆಡಳಿತ ಕೇಂದ್ರದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದರು. ರಕ್ತನಿಧಿ ಕೇಂದ್ರದ ರಿಜಿಸ್ಟರ್, ಡೇಕೇರ್ ಸೆಂಟರ್‌ನ ಗಳನ್ನು ಪರಿಶೀಲಿಸಿ ರವಾನೆಯಾಗದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಕೂಡಲೇ ಸಂಬಂಧಿತರಿಗೆ ಅಂಚೆ ಮೂಲಕ ರವಾನಿಸಲು ಸೂಚಿಸಿದರು.
ನಗರಸಭೆ ಕಚೇರಿಗೆ ಭೇಟಿ ನೀಡಿ ಅಲ್ಲಿನ ಬಯೋಮೆಟ್ರಿಕ್ ಕಾರ್ಯ, ಕಳೆದ ಮೂರು ವರ್ಷದಲ್ಲಿ ಕೈಗೊಂಡ ಕಾಮಗಾರಿ ವಿವರ, ವಾಹನಗಳ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ, ಇ-ಆಸ್ತಿ ಮಾಡುವ ಬಾಕಿ ಅರ್ಜಿಗಳ ವಿವರ, ಉದ್ದಿಮೆ ಪರವಾನಿಗೆ, ಪಾರ್ಕಿಂಗ್ ನಿರ್ವಹಣೆ, ನಗರಸಭೆಯ ಭೂಮಿ ಅತಿಕ್ರಮ ಮತ್ತಿತರ ವಿವರಗಳನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಹಾಗೂ ತಂಡದವರು ಪರಿಶೀಲಿಸಿ, ನ್ಯೂನತೆಗಳು ಕಂಡು ಬಂದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ವಿಚಾರಣೆ-1 ಅರವಿಂದ್ ಎನ್.ವಿ, ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ.ದಿನೇಶ್ ಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಸಹಾಯಕ ಕಮೀಷನರ್ ರಶ್ಮಿ ಮೊದಲಾದವರಿದ್ದರು.
ಉಡುಪಿ ಜಿಲ್ಲೆಯ ಬುದ್ದಿವಂತ ನೌಕರರು ಯಾಮಾರಿಸ್ತಾರೆ!
ಬಹುತೇಕ ಎಲ್ಲ ಇಲಾಖೆಗಳಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ, ಅವ್ಯವಹಾರ, ನಿರ್ಲಕ್ಷ್ಯ ಇತ್ಯಾದಿಗಳನ್ನು ಗಮನಿಸಿದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಸ್ವಯಂ ಪ್ರೇರಿತ ದೂರು ದಾಖಲಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಸರಕಾರಿ ನೌಕರರು ಬುದ್ದಿವಂತ ಮೋಸಗಾರರು. ನಾನು ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಆದರೆ, ಇಲ್ಲಿಯವರು ಬುದ್ಧಿವಂತರು. ಆದರೆ, ಯಾಮಾರಿಸ್ತಾರೆ. ಸೂಕ್ತ ಉತ್ತರ ಕೊಡುವುದಿಲ್ಲ. ಕರ್ತವ್ಯ ಲೋಪ ಮತ್ತು ತಪ್ಪು ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದೇನೆ ಎಂದರು.