ಈ ಸಲ ಕೂಡಾ ಕಪ್ ನಮ್ದೇ!

ಲೋಕಬಂಧು ನ್ಯೂಸ್, ಬರೋಡ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಬಾರಿಯೂ ಮತ್ತೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.


ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿಗೆ ಡೆಲ್ಲಿ ಬೃಹತ್‌ ರನ್‌ಗಳ ಗುರಿಯನ್ನೇ ನೀಡಿತ್ತು. ಡೆಲ್ಲಿ ಪರ ಆರಂಭಿಕ ಆಟಗಾರರು ಉತ್ತಮ ಅಡಿಪಾಯ ಹಾಕಿದರು.


ಲಿಜೆಲ್ ಲೀ ಮತ್ತು ಶಫಾಲಿ ವರ್ಮಾ ಜೋಡಿ 5.5 ಓವರ್‌ಗಳಲ್ಲಿ 49 ರನ್‌ ಗಳಿಸಿ ಬೇರ್ಪಟ್ಟಿತ್ತು. ಆದರೆ, ಅವರ ಬಳಿಕ ಬಂದ ಲಾರಾ ವೋಲ್ವಾರ್ಡ್ 44 (25) ಮತ್ತು ನಾಯಕಿ ಜೆಮಿಮಾ ರೋಡ್ರಿಗಸ್ 57 (37) ತಂಡವನ್ನು ಬೃಹತ್‌ ಮೊತ್ತ ಪೇರಿಸುವಲ್ಲಿ ನೆರವಾದರು.


ಚಿನೆಲ್ಲೆ ಹೆನ್ರಿ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ನಿಂದ 35 ರನ್‌ ಗಳಿಸಿ ತಂಡವನ್ನು 200 ಗಡಿ ದಾಟಿಸಿದರು. ಆರ್‌ಸಿಬಿ ಪರ ಲಾರೆನ್ ಬೆಲ್ ಮಾತ್ರ 4.80 ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ ಡೆಲ್ಲಿಯನ್ನು ಕಟ್ಟಿ ಹಾಕಿದರು. 204 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲಿಯೇ ಆಘಾತವಾಯಿತು. ಗ್ರೇಸ್ ಹ್ಯಾರಿಸ್ ಕೇವಲ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.


ಎರಡನೇ ವಿಕೆಟ್‌ಗೆ ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ಅತ್ಯುತ್ತಮ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಗೆಲುವಿಗೆ 29 ರನ್‌ಗಳು ಬಾಕಿ ಇರುವಾಗಲೇ ಜಾರ್ಜಿಯಾ ಔಟಾದರು.


ಬಳಿಕ ಕ್ರಿಸ್‌ಗೆ ಬಂದ ರಿಚಾ ಘೋಷ್‌ ಮಾತ್ರ 6 ರನ್‌ಗಳ ಕಾಣಿಕೆ ನೀಡಿ ಹೊರನಡೆದರು. ಅವರ ಹಿಂದೆಯೇ ಸ್ಮೃತಿ ಮಂಧಾನಾ ಕೂಡ 87 ರನ್‌ಗಳಿಗೆ ವಿಕೆಟ್‌ ಒಪ್ಪಿಸುತ್ತಿದ್ದಂತೆ ಆತಂಕ ಶುರುವಾಗಿತ್ತು. ಅಂತಿಮವಾಗಿ ರಾಧಾ ಯಾದವ್ ಕೇವಲ 5 ಎಸೆತಗಳಲ್ಲಿ 2 ಬೌಂಡರಿಗಳಿಂದ 12 ರನ್‌ ಗಳಿಸಿ ಎರಡು ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.


ಆರ್‌ಸಿಬಿಗೆ ಹ್ಯಾಟ್ರಿಕ್‌ ಕನಸು
ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ಈಗಾಗಲೇ ಡಬ್ಲ್ಯೂಪಿಎಲ್ 2024ರಲ್ಲಿ ಮಹಿಳಾ ತಂಡ ಒಂದು ಬಾರಿ ಚಾಂಪಿಯನ್‌ ಆಗಿದ್ದು, ಐಪಿಎಲ್‌ 2025ರ ಪಂದ್ಯಾವಳಿಯಲ್ಲಿ ಪುರುಷರ ತಂಡ ಚಾಂಪಿಯನ್‌ ಆಗಿತ್ತು. ಈ ಬಾರಿ ಮತ್ತೆ ಡಬ್ಲ್ಯೂಪಿಎಲ್ 2026ರಲ್ಲಿ ಚಾಂಪಿಯನ್‌ ಆಗುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದೆ.