ಲೋಕಬಂಧು ನ್ಯೂಸ್, ಉಡುಪಿ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯ ಕಚೇರಿಯಲ್ಲಿ ಫೆಬ್ರವರಿ 3ರಂದು ಮಂಗಳವಾರ ಭೇಟಿ ಮಾಡಿದ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಂದೇ ಭಾರತ್ ರೈಲು ಬೆಂಗಳೂರಿನಿಂದ ಮಂಗಳೂರು, ಉಡುಪಿ, ಉತ್ತರ ಕನ್ನಡದ ವರೆಗೆ ವಿಸ್ತರಿಸಬೇಕಾದ ಅಗತ್ಯವನ್ನು ವಿವರಿಸಿದರು.ಪ್ರತಿದಿನ ಉತ್ತರ ಕನ್ನಡ, ಕುಂದಾಪುರ, ಉಡುಪಿ, ಮಂಗಳೂರಿನಿಂದ 600ಕ್ಕೂ ಹೆಚ್ಚು ಬಸ್ ಮತ್ತು ಇತರ ಖಾಸಗಿ ವಾಹನಗಳು ರಾಜಧಾನಿ ಬೆಂಗಳೂರು ತಲುಪುತ್ತಿದ್ದು, ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲು ಕರಾವಳಿಗೆ ವಂದೇ ಭಾರತ್ ರೈಲು ಬಿಡುಗಡೆ ಮಾಡಬೇಕು ಎಂದು ವಿನಂತಿಸಿದರು.
ಮಂಗಳೂರಿನಿಂದ ಮುಂಬೈ ವರೆಗಿನ ಕೊಂಕಣ ರೈಲ್ವೆಯ 734 ಕಿ.ಮೀ. ಹಳಿಗಳನ್ನು ದ್ವಿಪಥಗೊಳಿಸುವ ಮೂಲಕ ಹೆಚ್ಚುವರಿ ರೈಲ್ವೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕೂಡಲೇ ಸರ್ವೇ ನಡೆಸಿ ಹಣ ಬಿಡುಗಡೆ ಮಾಡುವಂತೆಯೂ ವಿನಂತಿಸಿದರು.
ಹಲವು ವರ್ಷಗಳಿಂದ ಮಂಗಳೂರಿನಿಂದ ಕಾರವಾರ ವರೆಗಿನ ಕರಾವಳಿ ಜಿಲ್ಲೆಗಳ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆಯ ಕೊರತೆ ಇದ್ದು, ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ತುರ್ತು ಕ್ರಮಗಳಿಂದಾಗಿ ಸಾಕಷ್ಟು ಪ್ರಗತಿ ಕಂಡುಬರುತ್ತಿದ್ದು, ಇನ್ನೂ ಹೊಸ ರೈಲುಗಳ ಅಗತ್ಯ ಇರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ನೆರವು ನೀಡುವಂತೆ ಸಂಸದ ಕೋಟ ಅವರು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.