ಜೂ.19: ಪಿಎಂ-ವಿಬಿಆರ್.ವೈ ಫಲಾನುಭವಿಗಳಿಗೆ ನೇಮಕಾತಿ ಪತ್ರ ವಿತರಣೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.17
ಪ್ರಧಾನಮಂತ್ರಿ ವಿಕಸಿತ ಭಾರತ್ ರೋಜ್ಗಾರ್ ಯೋಜನೆ (ಪಿಎಂ-ವಿಬಿಆರ್.ವೈ)ಯಡಿ ಆಯ್ಕೆಯಾದ ಉಡುಪಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮ ಜೂ.19ರಂದು ಮಣಿಪಾಲ ರಾಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಕಾರ್ಮಿಕ ಭವಿಷ್ಯ ನಿಧಿ ಆಯುಕ್ತ ಶಶಿಕಾಂತ್ ದಹಿಯಾ ತಿಳಿಸಿದರು.
ಇಪಿಎಫ್ಒ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ವಿಕಸಿತ ಭಾರತ್ ರೋಜ್ಗಾರ್ ಯೋಜನೆಯಡಿ ದೇಶದಾದ್ಯಂತ ಅರ್ಹ ಫಲಾನುಭವಿಗಳಿಗೆ ಸುಮಾರು 2,400 ಕೋಟಿ ರೂ. ಮೌಲ್ಯದ ಸೌಲಭ್ಯಗಳನ್ನು ವಿತರಿಸುವ ರಾಷ್ಟ್ರೀಯ ಕಾರ್ಯಕ್ರಮ ಜೂ.19ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.


ಆ ರಾಷ್ಟ್ರೀಯ ಕಾರ್ಯಕ್ರಮದ ನೇರ ಪ್ರಸಾರ, ಫಲಾನುಭವಿಗಳು ಹಾಗೂ ಉದ್ಯೋಗದಾತರೊಂದಿಗೆ ಸಂವಾದವನ್ನು ಮಣಿಪಾಲದಲ್ಲಿ ಜೂ.19ರಂದು ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿಯೂ ಆಯೋಜಿಸಲಾಗಿದೆ.


ಬಳಿಕ ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.


ಉಡುಪಿ ಜಿಲ್ಲೆಯಲ್ಲಿ ಭಾಗ-ಎ ಅಡಿಯಲ್ಲಿ 700ಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಉದ್ಯೋಗ ಸೃಷ್ಟಿ ಮತ್ತು ಔಪಚಾರಿಕ ಉದ್ಯೋಗ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾಗವಹಿಸುವ ಸಂಸ್ಥೆಗಳು ಹೊಸ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಲಿವೆ.


ಯೋಜನೆಯ ಪ್ರಯೋಜನಗಳು 2025ರ ಆ.1ರಿಂದ 2027ರ ಜುಲೈ 31ರ ಅವಧಿಯಲ್ಲಿ ಸೃಷ್ಟಿಯಾಗುವ ಹೊಸ ಉದ್ಯೋಗಗಳಿಗೆ ಅನ್ವಯವಾಗಲಿದೆ. ಯೋಜನೆಯ ಭಾಗ-ಎ ಅಡಿಯಲ್ಲಿ ಇಪಿಎಫ್ಒ ವ್ಯಾಪ್ತಿಯ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ನೋಂದಾಯಿಸಿಕೊಂಡು ಮಾಸಿಕ 1 ಲಕ್ಷ ರೂ. ವರೆಗೆ ವೇತನ ಪಡೆಯುವ ಹೊಸ ಉದ್ಯೋಗಿಗಳಿಗೆ 15 ಸಾವಿರ ವರೆಗಿನ ಪ್ರೋತ್ಸಾಹ ಧನವನ್ನು ಎರಡು ಕಂತುಗಳಲ್ಲಿ ನೇರ ವರ್ಗಾವಣೆ ಮೂಲಕ ನೀಡಲಾಗುತ್ತದೆ ಎಂದವರು ಹೇಳಿದರು.


ಸುದ್ದಿಗೋಷ್ಟಿಯಲ್ಲಿ ಲೆಕ್ಕಾಧಿಕಾರಿಗಳಾದ ರಾಜೀವ್ ಕುಮಾರ್ ಝಾ ಹಾಗೂ ನರೇಂದ್ರ ಬಾಬು ಗುಟ್ಟಿ ಉಪಸ್ಥಿತರಿದ್ದರು.