ಲೋಕಬಂಧು ನ್ಯೂಸ್ | ಬೆಳ್ತಂಗಡಿ, ಜೂ.18
ಇಲ್ಲಿನ ರೆಂಕೆದಗುತ್ತುನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೂಗ ಸಂಸ್ಥೆಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಪ್ರತಿ ತಿಂಗಳು ಆಚರಿಸುವಂತೆ ಸಿರಿ ಸಿಬ್ಬಂದಿಗಳ ಹುಟ್ಟುಹಬ್ಬ ಆಚರಣೆ ಜೂ.16ರಂದು ನಡೆಯಿತು
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜೂನ್ ತಿಂಗಳಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿರಿ ಸಿಬ್ಬಂದಿಗಳು ಹಾಗೂ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.
ಡಾ.ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಮಹಿಳಾ ಸಬಲೀಕರಣದ ಧ್ಯೇಯೋದ್ದೇಶದಿಂದ ಪ್ರಾರಂಭಿಸಿರುವ ಸಿರಿ ಸಂಸ್ಥೆಯಲ್ಲಿ ಎಲ್ಲಾ ಸಿಬ್ಬಂದಿಗಳು ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿಯುವ ಮೂಲಕ ಸಿರಿ ಬ್ರ‍್ಯಾಂಡನ್ನು ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿಯುವ ಮೂಲಕ ಹೆಗ್ಗಡೆ ದಂಪತಿ ಕನಸನ್ನು ನನಸಾಗಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ ಅವರು ಸಂಸ್ಥೆಯ ಸಮಗ್ರ ಏಳಿಗೆಗಾಗಿ ಶ್ರಮವಹಿಸಿ, ಸಂಪೂರ್ಣ ಸಹಕಾರ ನೀಡುತ್ತಿರುವ ಎ.ವಿ.ಶೆಟ್ಟಿ ಮತ್ತವರ ಪತ್ನಿ ಅರುಣ ವಿ. ಶೆಟ್ಟಿ ಅವರನ್ನು ಎಲ್ಲಾ ಸಿರಿ ಸಿಬ್ಬಂದಿಗಳ ಪರವಾಗಿ ಗೌರವಿಸಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರು ಲೋಕ ಕಲ್ಯಾಣಾರ್ಥವಾಗಿ ನಡೆಸುತ್ತಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತು ವೀಡಿಯೊ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಸಿರಿ ಕ್ಲಬ್ ಅಧ್ಯಕ್ಷೆ ಉಷಾ, ಎಸ್.ಡಿ.ಎಂ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸಿರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಸಿರಿ ಸಂಸ್ಥೆಯ ಜೀವನ್ ಕುಮಾರ್ ನಿರೂಪಿಸಿ, ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ ವಂದಿಸಿದರು.
