ಲೋಪವಿಲ್ಲದಂತೆ ಪಾರದರ್ಶಕತೆಯಿಂದ ನೀಟ್ ಮರು ಪರೀಕ್ಷೆ ನಡೆಸಿ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.18
ಜಿಲ್ಲೆಯಲ್ಲಿ ಈ ತಿಂಗಳ 21ರಂದು ನಡೆಯಲಿರುವ ನೀಟ್ (ಯುಜಿ) ಮರು ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀಟ್ ಮರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ನೀಟ್ ಮರು ಪರೀಕ್ಷೆ ಜಿಲ್ಲೆಯ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಜಿಲ್ಲೆಯಲ್ಲಿ 938 ಬಾಲಕರು, 2,032 ಬಾಲಕಿಯರು, 7 ಪಿಡಬ್ಲ್ಯೂ ಬಿ.ಡಿ ಅಭ್ಯರ್ಥಿಗಳು ಹಾಗೂ 1 ಸ್ಕ್ರೈಬ್ ಸೌಲಭ್ಯ ಪಡೆದಿರುವ ಅಭ್ಯರ್ಥಿ ಸೇರಿದಂತೆ ಒಟ್ಟು 2,970 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಪರೀಕ್ಷಾ ಕಾರ್ಯ ನಡೆಸಬೇಕು.


ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲಕ್ಕೊಳಗಾಗದಂತೆ ನಿರಾಳವಾಗಿ ಪರೀಕ್ಷೆ ಬರೆಯಲು ಪೂರಕ ವಾತಾವರಣ ನಿರ್ಮಿಸಬೇಕು ಎಂದರು.


ನೀಟ್ ಮರು ಪರೀಕ್ಷೆ ಜೂ. 21ರಂದು ಅಪರಾಹ್ನ 2ರಿಂದ ಸಂಜೆ 5.15ರ ವರೆಗೆ ನಡೆಯಲಿದೆ. ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷ ಕಾಲಾವಕಾಶ ನೀಡಲಾಗಿದೆ. ದಿವ್ಯಾಂಗ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ಇರಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ವಿದ್ಯಾರ್ಥಿಗಳ ಪರಿಶೋಧನೆ ಕಾರ್ಯ ನಡೆಸಿ, ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಿಗೆ ತೆರಳಲು ಅನುವು ಮಾಡಿಕೊಡಬೇಕು. ನಂತರ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶವಿಲ್ಲ ಎಂದರು.


ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ಬ್ಲ್ಯೂಟೂತ್ ಡಿವೈಸ್, ಇಯರ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ವಾಲೆಟ್ಸ್, ಹ್ಯಾಂಡ್ ಬ್ಯಾಗ್ ಧರಿಸುವುದನ್ನು ನಿಷೇಧಿಸಲಾಗಿದೆ.


ಪರೀಕ್ಷೆ ಆರಂಭವಾಗುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ಹಾಜರಿರಬೇಕು ಹಾಗೂ ತಮ್ಮ ಪರೀಕ್ಷಾ ಪ್ರವೇಶ ಪತ್ರದ ಜೊತೆ ಯಾವುದಾದರೊಂದು ಮೂಲ ಗುರುತಿನ ಚೀಟಿಯೊಂದಿಗೆ (ಕಾಲೇಜಿನ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತಿತರ ಮೂಲಪ್ರತಿ) ಸೂಚನೆಯಲ್ಲಿ ತಿಳಿಸಿರುವಂತೆ 2 ಭಾವಚಿತ್ರಗಳೊಂದಿಗೆ ಪರೀಕ್ಷೆಗೆ ಹಾಜರಿರಬೇಕು ಎಂದರು.


ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ಪ್ರಶ್ನೆ ಪತ್ರಿಕೆ ತರಿಸಿಕೊಳ್ಳಲು, ಉತ್ತರ ಪತ್ರಿಕೆ ರವಾನೆಗೆ ಅನುಕೂಲವಾಗುವಂತೆ ವಾಹನ ಸಿದ್ಧವಾಗಿಟ್ಟುಕೊಳ್ಳಬೇಕು. ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗದಂತೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು, ತುರ್ತು ಸಂದರ್ಭ ಎದುರಿಸಲು ಅನುಕೂಲವಾಗುವಂತೆ ಅಗ್ನಿಶಾಮಕ ವಾಹನ ಸನ್ನದ್ಧ ಸ್ಥಿತಿಯಲ್ಲಿರಬೇಕು. ಮುಂಜಾಗ್ರತೆಯಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಹಾಯಕರನ್ನು ನೇಮಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.


6 ಕೇಂದ್ರಗಳಲ್ಲಿ ಪರೀಕ್ಷೆ
ನೀಟ್ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಉಡುಪಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್. ಖರೀಂ ಖಾನ್ ಮಾತನಾಡಿ, ನೀಟ್ ಮರು ಪರೀಕ್ಷೆ ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಾದ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ ವಿವೇಕ ಪಿ.ಯು. ಕಾಲೇಜು, ಉಡುಪಿ ಎಂ.ಜಿ.ಎಂ ಪಿಯು ಕಾಲೇಜು, ಉಡುಪಿಯ ಸರ್ಕಾರಿ ಪಿ.ಯು.‌ಕಾಲೇಜು (ಬೋರ್ಡ್ ಹೈಸ್ಕೂಲ್), ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.


ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕಡೆಯಿಂದ ಮೆಟಲ್ ಡಿಡೆಕ್ಟರ್ ಅಳವಡಿಸಲಾಗಿದ್ದು, ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಪ್ರಿಸ್ಕಿಂಗ್ ನಡೆಸಲಾಗುವುದು. ಬಯೋಮೆಟ್ರಿಕ್ ದೃಢೀಕರಣದ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪರೀಕ್ಷೆ ಮುಗಿದ ನಂತರ ಓ.ಎಂ.ಆರ್ ಶೀಟ್'ಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಮಾರ್ಗಸೂಚಿಯನುಸಾರ ಕ್ರಮ ವಹಿಸಬೇಕು ಎಂದರು.


ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ನೀಟ್ ಪರೀಕ್ಷೆಯ ಡೆಪ್ಯೂಟಿ ಸಿಟಿ ಕೋ-ಆರ್ಡಿನೇಟರ್ ಕೇಂದ್ರೀಯ ವಿದ್ಯಾಲಯದ ಶಿಕ್ಷಕ ವಸಂತ ಪದ್ಮಶಾಲಿ ಮೊದಲಾದವರಿದ್ದರು.