ಮುಗಿದ ಪರಿಷತ್ ಚುನಾವಣೆ: ಫಲಿತಾಂಶದತ್ತ ಎಲ್ಲರ ಚಿತ್ತ‌

ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.18
ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ಚುನಾವಣೆಗೆ ಗುರುವಾರ ನಡೆದ ಮತದಾದಲ್ಲಿ 222 ಶಾಸಕರು ಮತ ಚಲಾಯಿಸಿದ್ದು, ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜ್ ನಡುವಿನ ಪೈಪೋಟಿ ತೀವ್ರ ಕುತೂಹಲ ಮೂಡಿಸಿದೆ. ಕ್ರಾಸ್‌ ವೋಟಿಂಗ್ ಚರ್ಚೆಯ ನಡುವೆ ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕಳೆದ ಹಲವು ದಿನಗಳಿಂದ ನಡೆಸಿದ್ದ ರಾಜಕೀಯ ಕಾರ್ಯತಂತ್ರಗಳ ಯಶಸ್ಸು- ವಿಫಲತೆ ಮತ ಎಣಿಕೆಯೊಂದಿಗೆ ಸ್ಪಷ್ಟವಾಗಲಿದೆ.


ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ 135 ಶಾಸಕರು, ಬಿಜೆಪಿಯ 62 ಶಾಸಕರು, ಜೆಡಿಎಸ್‌ನ 18 ಶಾಸಕರು, ಬಿಜೆಪಿ ಉಚ್ಚಾಟಿತ ಮೂವರು ಶಾಸಕರು, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರೈತ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಹಾಗೂ ಪಕ್ಷೇತರ ಶಾಸಕರು ಮತದಾನದಲ್ಲಿ ಭಾಗವಹಿಸಿದರು.


ಗೆಲುವಿಗೆ 28 ಮತಗಳ ಅಗತ್ಯ
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲು ಪ್ರತಿಯೊಬ್ಬ ಅಭ್ಯರ್ಥಿಗೂ ಕನಿಷ್ಠ 28 ಮತಗಳ ಅಗತ್ಯವಿದೆ. ಕಾಂಗ್ರೆಸ್ ಪಕ್ಷದ ಪರವಾಗಿ ಬಿ.ಕೆ. ಹರಿಪ್ರಸಾದ್, ಪಿ.ವಿ. ಮೋಹನ್, ತಿಪ್ಪಣ್ಣಪ್ಪ ಕಮಕನೂರು, ಮಾಳವಳ್ಳಿ ಶಿವಣ್ಣ ಹಾಗೂ ವಿನಯ್ ಕಾರ್ತಿಕ್ ಕಣದಲ್ಲಿದ್ದರೆ, ಬಿಜೆಪಿಯಿಂದ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜ್ ಕಣಕ್ಕಿಳಿದಿದ್ದಾರೆ.


ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಕಾಂಗ್ರೆಸ್‌ನ ಮೊದಲ ನಾಲ್ವರು ಅಭ್ಯರ್ಥಿಗಳು ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ, ಏಳನೇ ಸ್ಥಾನಕ್ಕಾಗಿ ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಮತ್ತು ಜೆಡಿಎಸ್‌ನ ಗೋವಿಂದರಾಜ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.


ರೆಸಾರ್ಟ್ ರಾಜಕೀಯ ಮತ್ತು ಅಣಕು ಮತದಾನ
ಮತದಾನಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಬಿಡದಿ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಇರಿಸಿ ವಿಶೇಷ ತರಬೇತಿ ನೀಡಿತ್ತು. ಪ್ರಾಶಸ್ತ್ಯ ಮತದಾನದ ವಿಧಾನದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಅಣಕು ಮತದಾನವನ್ನೂ ನಡೆಸಲಾಗಿತ್ತು.


ಮತದಾನದ ದಿನ ಬೆಳಿಗ್ಗೆ ಶಾಸಕರನ್ನು ಐದು ಬಸ್‌ಗಳಲ್ಲಿ ವಿಧಾನಸೌಧಕ್ಕೆ ಕರೆತರಲಾಯಿತು. ಪ್ರತಿಯೊಂದು ಬಸ್‌ನಲ್ಲೂ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕಬೇಕಾದ ಶಾಸಕರನ್ನು ಗುಂಪು ಮಾಡಿ ಕರೆದೊಯ್ಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.


ಅನಾರೋಗ್ಯದ ನಡುವೆಯೂ ಮತದಾನ
ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅನಾರೋಗ್ಯದ ನಡುವೆಯೂ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸಿದರು. ಇದೇ ವೇಳೆ ತಿಪಟೂರಿನ ಶಾಸಕ ಕೆ. ಷಡಕ್ಷರಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಗವಾಡ ಶಾಸಕ ರಾಜು ಕಾಗೆ ಕೂಡಾ ಆರೋಗ್ಯ ಸಮಸ್ಯೆಯ ನಡುವೆಯೇ ಮತದಾನದಲ್ಲಿ ಭಾಗವಹಿಸಿದರು.


ಬಿಜೆಪಿ ಮತ್ತು ಜೆಡಿಎಸ್ ಕಾರ್ಯತಂತ್ರ
ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಿರುವ ಮತಗಳನ್ನು ಹಂಚಿಕೆ ಮಾಡಿದ ಬಳಿಕ ಉಳಿದ ಹೆಚ್ಚುವರಿ ಮತಗಳನ್ನು ಎನ್‌ಡಿಎ ಮಿತ್ರಪಕ್ಷ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜ್ ಅವರಿಗೆ ವರ್ಗಾಯಿಸುವ ಯೋಜನೆ ರೂಪಿಸಿತ್ತು. ಇನ್ನೊಂದೆಡೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ತನ್ನ ಶಾಸಕರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿರಿಸಿ ಕಾರ್ಯತಂತ್ರ ರೂಪಿಸಿತ್ತು. ಬಳಿಕ ಎಲ್ಲ ಶಾಸಕರು ಒಟ್ಟಾಗಿ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸಿದರು.


ಸಂಜೆ ಫಲಿತಾಂಶದತ್ತ ಎಲ್ಲರ ಚಿತ್ತ
ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದತ್ತ ಇದೀಗ ಎಲ್ಲರ ಗಮನ ನೆಟ್ಟಿದೆ. ಪಕ್ಷಗಳ ಲೆಕ್ಕಾಚಾರಗಳು ಎಷ್ಟು ಯಶಸ್ವಿಯಾಗಿವೆ, ಕ್ರಾಸ್‌ ವೋಟಿಂಗ್ ಎಷ್ಟು ಪ್ರಮಾಣದಲ್ಲಿ ನಡೆದಿದೆ ಮತ್ತು ಏಳನೇ ಸ್ಥಾನ ಯಾರ ಪಾಲಾಗಲಿದೆ ಎಂಬ ಪ್ರಶ್ನೆಗಳಿಗೆ ಸಂಜೆ ನಡೆಯುವ ಮತ ಎಣಿಕೆಯ ಬಳಿಕ ಉತ್ತರ ದೊರೆಯಲಿದೆ.


ರಾಜಕೀಯ ವಲಯದ ಕುತೂಹಲ ಹೆಚ್ಚಿಸಿರುವ ಈ ಚುನಾವಣೆ, ವಿಧಾನಸಭೆಯೊಳಗಿನ ನೈಜ ರಾಜಕೀಯ ಸಮೀಕರಣಗಳನ್ನು ಬಯಲಿಗೆಳೆಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.