ಲೋಕಬಂಧು ನ್ಯೂಸ್ | ಪಡುಬಿದ್ರಿ, ಜೂ.13
ದೇಶದ ಆರ್ಥಿಕತೆ ಸದೃಢವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದೆ. ಆದರೂ ಕಾಂಗ್ರೆಸ್ ಸಹಿತ ವಿಪಕ್ಷಗಳು ಸಾಮಾಜಿಕ ಮಾಧ್ಯಮ ಸಹಿತ ವಿವಿಧ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ, ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸುದ್ದಿಗಳ ಸತ್ಯಾನ್ವೇಷಣೆ ನಡೆಸಿ, ಜನತೆಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಅಂಗವಾಗಿ ಉಚ್ಚಿಲ ಮೊಗವೀರ ಸಭಾಭವನದಲ್ಲಿ ನಡೆಯುತ್ತಿರುವ ಎರಡು ದಿನಗಳವಧಿಯ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೆಲವು ಮುದ್ರಣ, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಬಿತ್ತರವಾಗುವ ಸುದ್ದಿಗಳು ನೈಜವಾದವುಗಳಲ್ಲ. ಅವು ಹಣ ತೆತ್ತು ಪ್ರಕಟಿಸುವ ಸುದ್ದಿಗಳಾಗಿದ್ದು, ಅದಕ್ಕಾಗಿಯೇ ಬಂಡವಾಳ ಹೂಡುವವರು ಇದ್ದಾರೆ. ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಇತ್ಯಾದಿಗಳನ್ನು ಪ್ರೆಸ್ ಇನಫಾರ್ಮೇಶನ್ ಬ್ಯೂರೊ (ಪಿಐಬಿ) ನೀಡುತ್ತದೆ. ಸರ್ಕಾರಿ ಸ್ವಾಮ್ಯದ ಈ ಸಂಸ್ಥೆ ಪ್ರಕಟಿಸುವ ಸುದ್ದಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳೊಂದಿಗೆ ಪರಾಮರ್ಶಿಸಿ ನೈಜ ಸಂಗತಿಗಳನ್ನು ಜನತೆಗೆ ತಿಳಿಸುವ ಹೊಣೆಗಾರಿಕೆ ಸಂಸದ, ಶಾಸಕರಿಂದ ತೊಡಗಿ ಬೂತ್ ಮಟ್ಟದ ಕಾರ್ಯಕರ್ತರ ವರೆಗೆ ಪ್ರತಿಯೊಬ್ಬರಿಗೂ ಇದೆ ಎಂದರು.
ಜಾಗತಿಕ ಆರ್ಥಿಕ ಪರಿಸ್ಥಿತಿ, ಮಧ್ಯಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಇತರ ರಾಷ್ಟ್ರಗಳಿಗಿಂತ ಸದೃಢವಾಗಿದೆ. ಜಿಡಿಪಿ ಮತ್ತು ಜಿಎಸ್‌ಟಿ ದರಗಳಲ್ಲಿ ವೃದ್ಧಿಯಾಗಿದೆ. ಅದನ್ನು ವಿಶ್ವ ಬ್ಯಾಂಕ್ ಕೂಡಾ ಒಪ್ಪಿಕೊಂಡಿದೆ. ದೇಶದ ಕೈಗಾರಿಕೆ ವಲಯಗಳಲ್ಲಿ ಹೂಡಿಕೆ ಪ್ರಮಾಣ ಶೇ.60ರಷ್ಟು ಹೆಚ್ಚಿದೆ. ಕಳೆದ ಮೂರು ತ್ರೈಮಾಸಿಕ ವರದಿಗಳಲ್ಲಿ ದೇಶದ ಆರ್ಥಿಕತೆ ಪ್ರಮಾಣ ಶೇ. 7.8ರಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶಗಳನ್ನು ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್, ಜಿಲ್ಲಾವಾರು ಪ್ರಗತಿ ಮಾನದಂಡ ಅನುಸರಿಸಿ ಆ ಮೂಲಕ ದೇಶದ ಒಟ್ಟೂ ಪ್ರಗತಿ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಈ ಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಅನುಸರಿಸುತ್ತಿದೆ ಎಂದು ಉದಾಹರಿಸಿದರು.
ಪ್ರಧಾನಿ ಮೋದಿ ಆಶಯದ 'ಸಬ್ ಕಾ ಸಾಥ್- ಸಬ್ ಕಾ ವಿಕಾಸ್' ಜೊತೆಗೆ 'ಸಬ್ ಕಾ ಪ್ರಯಾಸ್' (ಪರಿಶ್ರಮ) ಇಂದಿನ ಅಗತ್ಯವಾಗಿದೆ. ಕೇವಲ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಸಮಗ್ರ ಅಭಿವೃದ್ಧಿ ಭಾರತದಂಥ ದೊಡ್ಡ ದೇಶದಲ್ಲಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಭಿವೃದ್ಧಿಯಲ್ಲಿ ಸರ್ವರ ಸಹಭಾಗಿತ್ವ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಪ್ರಸ್ತಾವನೆಗೈದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ಗುರ್ಮೆ ಸುರೇಶ ಶೆಟ್ಟಿ, ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಪ್ರಶಿಕ್ಷಣ ಸಂಯೋಜಕ ಕೆ.ಉದಯ ಕುಮಾರ್ ಶೆಟ್ಟಿ, ಶಿಲ್ಪ ಜಿ. ಸುವರ್ಣ ಮೊದಲಾದವರಿದ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯಕ್ ಸ್ವಾಗತಿಸಿ, ದಿನಕರ ಶೆಟ್ಟಿ ಹೆರ್ಗ ನಿರೂಪಿಸಿದರು. ಕೆ.ಬಿ.ಶೆಟ್ಟಿ ವಂದಿಸಿದರು.
ಶಾಸಕ ಸುರೇಶ ಕುಮಾರ್, ವಿಕಾಸ್ ಪುತ್ತೂರು, ಲೋಕೇಶ ಅಂಬೆಕಲ್ಲು ಮೊದಲಾದವರು ಸಂಪನ್ಮೂಲವ್ಯಕ್ತಿಗಳಾಗಿದ್ದರು.
