ಚಲಿಸುತ್ತಿದ್ದ ಶಾಲಾ ಬಸ್'ನಲ್ಲಿ ಚಾಲಕನಿಗೆ ಹೃದಯಾಘಾತ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.15
ಚಲಿಸುತ್ತಿದ್ದ ಶಾಲಾ ಬಸ್ಸಿನ ಚಾಲಕನಿಗೆ ಹಠಾತ್ ಹೃದಯಾಘಾತ ಉಂಟಾಗಿ ಬಸ್ ಡಿವೈಡರ್'ಗೆ ಢಿಕ್ಕಿಯಾದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.


ಮಣಿಪಾಲದ ಮಾಧವ ಕೃಪಾ ಶಾಲೆಗೆ ಸೇರಿದ ಬಸ್, ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕ ಸುರೇಶ್ ಸಣ್ಣಕ್ಕಿಬೆಟ್ಟು (54) ಎಂಬವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು.


ಪರಿಸ್ಥಿತಿಯನ್ನು ಅರಿತ ಚಾಲಕ ಬಸ್ ನಿಯಂತ್ರಣ ಕಳೆದುಕೊಳ್ಳುವ ಮುನ್ನವೇ ವಾಹನವನ್ನು ರಸ್ತೆ ಬದಿಗೆ ತರುವ ಪ್ರಯತ್ನ ನಡೆಸಿದರು. ಆ ವೇಳೆ ಬಸ್ ಡಿವೈಡರ್'ಗೆ ಢಿಕ್ಕಿ ಹೊಡೆಯಿತು.


ಅದೃಷ್ಟವಶಾತ್ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯ ಹೊರತುಪಡಿಸಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಚಾಲಕನ ಸಮಯೋಚಿತ ಕ್ರಮದಿಂದ ದೊಡ್ಡ ದುರಂತವೊಂದು ತಪ್ಪಿದೆ.


ತಕ್ಷಣ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ಚಾಲಕನ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.