ಲೋಕಬಂಧು ನ್ಯೂಸ್ | ಕುಂದಾಪುರ, ಜೂ.13
ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಅಪೇಕ್ಷೆ ಅಥವಾ ಷರತ್ತುಗಳಿರುವುದಿಲ್ಲ. ದೇವರ ಪ್ರೀತಿಯನ್ನು ಅನುಭವಿಸಲು ನಾವು ಯಾವುದೇ ದೊಡ್ಡ ಸಾಧನೆಗಳನ್ನು ಮಾಡಬೇಕಾಗಿಲ್ಲ. ಬದಲಾಗಿ, ಶುದ್ಧ ಮನಸ್ಸು ಮತ್ತು ಭಕ್ತಿಯಿಂದ ದೇವರನ್ನು ನೆನೆದರೆ ಸಾಕು. ಆತನ ಪ್ರೀತಿ ನಮಗೆ ಕಷ್ಟದ ಸಮಯದಲ್ಲಿ ಧೈರ್ಯ ಮತ್ತು ನೋವಿನಲ್ಲಿ ಸಾಂತ್ವನವನ್ನು ನೀಡುತ್ತದೆ ಎಂದು ಉಡುಪಿ ಬಿಷಪ್ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಸಿದ್ದಾಪುರ ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಿದ ನೂತನ ಆಶ್ರಮ ಉದ್ಘಾಟಿಸಿ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು.
ಮಾನವರ ಪ್ರೀತಿ ಕೆಲವೊಮ್ಮೆ ಕೊನೆಗೊಳ್ಳಬಹುದು. ಆದರೆ, ದೈವಿಕ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ. ನಾವು ತಪ್ಪು ಮಾಡಿದಾಗಲೂ ದೇವರು ನಮ್ಮನ್ನು ಕ್ಷಮಿಸಿ, ಸರಿ ದಾರಿಯಲ್ಲಿ ಮುನ್ನಡೆಸುತ್ತಾನೆ. ನಿಸ್ವಾರ್ಥವಾಗಿ ಹಾಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡಿದಾಗ ಅದರಿಂದ ಬರುವ ಸತ್ಫಲ ನಮ್ಮ ಜೀವನವನ್ನು ರಕ್ಷಿಸುತ್ತದೆ ಮತ್ತು ಒಳಿತನ್ನು ಮಾಡುತ್ತದೆ ಎಂದರು.
ದೇವರ ಹೆಸರಿನಲ್ಲಿ ನಿಷ್ಕಲ್ಮಷ ಮನಸ್ಸಿನಿಂದ ಬಡವರು ಮತ್ತು ನಿರ್ಗತಿಕರಿಗೆ ಮಾಡುವ ಸೇವೆಗೆ ಪ್ರತಿಫಲ ಖಂಡಿತವಾಗಿ ಸಿಗುತ್ತದೆ. ನಿಸ್ವಾರ್ಥ ಸೇವೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮನುಷ್ಯನಿಗೆ ಒಳಿತನ್ನು ಮಾಡುತ್ತದೆ ಎಂದರು.
ಧರ್ಮಪ್ರಾಂತ್ಯದಲ್ಲಿ ಜನರ ಆಧ್ಯಾತ್ಮಿಕ ಬೆಳವಣಿಗೆಗೆ ಮೊದಲ ಆದ್ಯತೆಯಾಗಿ ಶ್ರಮಿಸುವುದರೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸುವುದರೊಂದಿಗೆ ಧರ್ಮಪ್ರಾಂತ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕುರಿತು ಚಿಂತನೆ ನಡೆಸಲಾಗಿದೆ. ಭಕ್ತರು ಹಾಗೂ ಉದಾರ ಮನಸ್ಸಿನ ದಾನಿಗಳು ಇಂಥ ಉತ್ತಮ ಕಾರ್ಯಕ್ಕೆ ಕೈಜೋಡಿಸಿದಲ್ಲಿ ಕನಸು ನನಸಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ ಎಂದು ಬಿಷಪ್ ತಿಳಿಸಿದರು.
ಮಹಾಪೋಷಕ ಫಿಲಿಪ್ ಡಿ'ಕೋಸ್ತಾ ಬಸ್ರೂರು ನೂತನ ಆಶ್ರಮವನ್ನು ಉದ್ಘಾಟಿಸಿದರು.
ಪುಣ್ಯಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರನ್ನು ಮತ್ತು ಶ್ರೇಷ್ಠಗುರುಗಳನ್ನು ಹಾಗೂ ಕ್ಷೇತ್ರದ ರೆಕ್ಟರ್, ಆಶ್ರಮದ ಮೇಲ್ವಿಚಾರಕ ಫ್ರಾನ್ಸಿಸ್ಕನ್, ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆಯನ್ನು ಗೌರವಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಕ್ಸೇವಿಯರ್ ಲೂವಿಸ್, ಕುಲಪತಿ ವಂ.ಸ್ಟೀವನ್ ಡಿ'ಸೋಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಪಾವ್ಲ್ ರೇಗೊ, ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆ ಸಿ.ಎಲ್ಸಿ ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದಿಂದ ಆಗಮಿಸಿದ ಧರ್ಮಗುರುಗಳು, 6 ಸಾವಿರಕ್ಕೂ ಅಧಿಕ ಭಕ್ತಾದಿಗಳು ಉಪಸ್ಥಿತರಿದ್ದರು.
ಪುಣ್ಯಕ್ಷೇತ್ರದ ರೆಕ್ಟರ್ ವಂ.ಸುನಿಲ್ ವೇಗಸ್ ವಂದಿಸಿದರು. ವಂ.ರೋಯ್ ಲೋಬೊ ಹಾಗೂ ವಂ.ವಿಲ್ಸನ್ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು.