ಮಾರಿಷಸ್ ರಾಷ್ಟ್ರಪತಿಯಿಂದ ಪುತ್ತಿಗೆ ಶ್ರೀಗೆ ಸ್ವಾಗತ

ಲೋಕಬಂಧು ನ್ಯೂಸ್ | ಉಡುಪಿ, ಜೂ.26
ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಭಾಗವಹಿಸಲು ಮಾರಿಷಸ್'ಗೆ ಆಗಮಿಸಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಮಾರಿಷಸ್ ದೇಶದ ರಾಷ್ಟ್ರಪತಿ ಧರಮ್ ಬೀರ್ ಗೋಕುಲ್ ಅವರು ರಾಷ್ಟ್ರಪತಿ ಭವನಕ್ಕೆ ಬರಮಾಡಿಕೊಂಡು ಸ್ವಾಗತಿಸಿದರು.
ಪ್ರಸ್ತುತ ವಿದ್ಯಮಾನಗಳ ಕುರಿತು ಸುಮಾರು 40 ನಿಮಿಷ ಕಾಲ ಮಾತುಕತೆ ನಡೆಸಿದರು. ಶ್ರೀಗಳ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಂದ ಪ್ರಭಾವಿತನಾಗಿರುವುದಾಗಿ ತಿಳಿಸಿದ ರಾಷ್ಟ್ರಪತಿ, ಉಡುಪಿ ಶ್ರೀಕೃಷ್ಣನ ಸ್ಥಾಪನೆಯ ಹಿನ್ನೆಲೆ ಹಾಗೂ ಮಧ್ವ ಸಿದ್ಧಾಂತದ ಸಾರಾಂಶವನ್ನು ಶ್ರೀಗಳಿಂದ ತಿಳಿದುಕೊಂಡರು.


ವಿಶ್ವದಾದ್ಯಂತ ಅಂತರ ಮತೀಯ ಶಾಂತಿ ಸೌಹಾರ್ದತೆಗಾಗಿ ವಿಶ್ವ ಧಾರ್ಮಿಕ ನಾಯಕರೊಂದಿಗೆ ಪುತ್ತಿಗೆ ಶ್ರೀಗಳು ಕೈಜೋಡಿಸಿರುವುದನ್ನು ಶ್ಲಾಘಿಸಿದರು.


ಪುತ್ತಿಗೆ ಶ್ರೀಪಾದರು ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗಿಯಾಗಲು ಭಗವದ್ಗೀತೆಯ ಪುಸ್ತಕ ನೀಡಿದರು. ಭಾರತಕ್ಕೆ ಭೇಟಿ ನೀಡಿದಾಗ ಉಡುಪಿಗೆ ಆಗಮಿಸುವಂತೆ ಆಹ್ವಾನಿಸಿದರು.