ರಾಮಮಂದಿರ ದೇಣಿಗೆ ಲೂಟಿ ಪ್ರಕರಣ: ಚಂಪತ್ ರಾಯ್ ಸಹಿತ ಈರ್ವರು ರಾಜೀನಾಮೆ

ಲೋಕಬಂಧು ನ್ಯೂಸ್ | ಲಕ್ನೋ, ಜೂ.26
ಸಮಸ್ತ ಹಿಂದೂಗಳ ಹೃದಯಸಾಮ್ರಾಜ್ಯ ದೇವತೆ ಅಯೋಧ್ಯೆಯ ಶ್ರೀರಾಮ ಮಂದಿರ ದೇಣಿಗೆ ಲೂಟಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಅನಿಲ್ ಮಿಶ್ರಾ ಶುಕ್ರವಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸ್ವೀಕರಿಸಿದ ದೇಣಿಗೆಗಳ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗ ಅಧಿಕೃತವಾಗಿ ಎಫ್ಐಆರ್ ದಾಖಲಿಸುವ ಮೂಲಕ ಆರೋಪಿಗಳನ್ನು ಹೆಸರಿಸಿದೆ.


ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ಮೇರೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್)ದ ಹಲವು ಸೆಕ್ಷನ್'ಗಳಡಿ ಪ್ರಕರಣ ದಾಖಲಿಸಲಾಗಿದೆ. ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ,  ಟಿನ್ನೂ ಯಾದವ್, ಮನೀಶ್ ಯಾದವ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.


ಅಯೋಧ್ಯೆಯ ಮಾಜಿ ಎಸ್‌ಪಿ ಶಾಸಕ ಪವನ್ ಪಾಂಡೆ ಅವರು ಶ್ರೀರಾಮ ಮಂದಿರದಲ್ಲಿ 7 ಕೋಟಿಯಿಂದ 7.5 ಕೋಟಿ ರೂ.ಗಳ ವರೆಗೆ ದೇಣಿಗೆ ದುರುಪಯೋಗವಾಗಿದೆ ಎಂದು ಆರೋಪಿಸಿದ ನಂತರ ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್ಐಟಿ ರಚನೆ ಮಾಡಿದೆ.


ಯೋಗಿ ತೀವ್ರ ಆಕ್ರೋಶ
ಈ ಹಗರಣದ ಕುರಿತು ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸನಾತನ ಮೌಲ್ಯಗಳು ಮತ್ತು ಸಾರ್ವಜನಿಕರ ಶ್ರದ್ಧೆಯೊಂದಿಗೆ ಆಟವಾಡಲು ಯತ್ನಿಸುವವರ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅಳವಡಿಸಿಕೊಂಡಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.


ವಿಶೇಷ ತನಿಖಾ ತಂಡ ತನ್ನ ಪ್ರಾಥಮಿಕ ವರದಿ ಸಲ್ಲಿಸಿದ ತಕ್ಷಣ ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.


ದೇವರಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಅಯೋಧ್ಯೆಯ ಘನತೆಗೆ ಧಕ್ಕೆ ತರುವ ಯಾವುದೇ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದರು.