ಲೋಕಬಂಧು ನ್ಯೂಸ್ | ಉಡುಪಿ, ಜೂ.24
ಒತ್ತಡದ ವೃತ್ತಿ ಬದುಕಿನಲ್ಲಿರುವ ಪತ್ರಕರ್ತರು ದಿನದ 45 ನಿಮಿಷ ವ್ಯಾಯಮ, ನಡಿಗೆ (ವಾಕಿಂಗ್)ಗೆ ಮೀಸಲಿಡಬೇಕು. ಆ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಬೇಕು ಎಂದು ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾಸ್ಪತ್ರೆ ಎನ್.ಸಿ.ಡಿ. ವಿಭಾಗ, ಜಿಲ್ಲಾ ಸರ್ವೇಕ್ಷಣ ಘಟಕ (ಎನ್.ಸಿ.ಡಿ), ರಾಷ್ಟ್ರೀಯ ಆರೋಗ್ಯ ಅಭಿಯಾನ, ಉಡುಪಿ ಆದರ್ಶ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯ ಸಹಯೋಗದೊಂದಿಗೆ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರದ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಶಿಬಿರ ಉದ್ಘಾಟಿಸಿ, ಸಮಾಜದ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುವ ಪತ್ರಕರ್ತರು ಸ್ವಂತ ಆರೋಗ್ಯದತ್ತಲೂ ಗಮನ ಕೊಡಬೇಕು ಎಂದರು.
ಮತ್ತೋರ್ವ ಅತಿಥಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಜಿಲ್ಲಾ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ನಿರೂಪಿಸಿದರು.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಇಸಿಜಿ, ಹೀಮೊಗ್ಲೋಬಿನ್ ಪರೀಕ್ಷೆ, ಕೊಲೆಸ್ಟ್ರಾಲ್, ಕಣ್ಣಿನ ಪರೀಕ್ಷೆ ಇತ್ಯಾದಿ ನಡೆಸಲಾಯಿತು. ಅಸಾಂಕ್ರಮಿಕ ರೋಗ ತಡೆಗೆ ಜೀವನ ಶೈಲಿಯ ಮರ್ಪಾಡು ಬಗ್ಗೆ ಮಾಹಿತಿ, ಫಿಜಿಯೊಥೆರಪಿ, ತಂಬಾಕು ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸಂಘದ 2026- 27ನೇ ಸಾಲಿನ ಸದಸ್ಯತ್ವ ಕಾರ್ಡುಗಳನ್ನು ವಿತರಿಸಲಾಯಿತು.
.jpg)
.jpg)
.jpg)