ಲೋಕಬಂಧು ನ್ಯೂಸ್ | ಉಡುಪಿ, ಜೂ.19
ಬ್ರಹ್ಮಾವರದಲ್ಲಿ ಹೊಸ ಮತ್ತು ಪೂರ್ಣ ಪ್ರಮಾಣದ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಸರಕಾರದ ಆದೇಶವನ್ನು ಉಡುಪಿ ಬಾರ್ ಅಸೋಸಿಯೇಷನ್ ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಸ್ತುತ ವಾರಕ್ಕೆ 4 ದಿನ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿರುವ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಉಡುಪಿಯಲ್ಲಿಯೇ ಶಾಶ್ವತವಾಗಿ ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ, ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ವಾರಕ್ಕೆ 4 ದಿನ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ವಕೀಲರ ಸಂಘದ ಪ್ರಬಲ ಆಕ್ಷೇಪಣೆ ಇತ್ತು. ಜೊತೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಪತ್ರವೊಂದರ ಮೂಲಕ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 65 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದ್ದು, 1961ರಿಂದ ಕಾರ್ಯಾಚರಿಸುತ್ತಿತ್ತು. ಅಂದಿನಿಂದ ಜನರಿಗೆ ನ್ಯಾಯ ನೀಡುವ ವಿಷಯದಲ್ಲಿ ಸಾಕಷ್ಟು ಕೆಲಸದ ಹೊರೆಯೊಂದಿಗೆ ಉಡುಪಿ ಜಿಲ್ಲಾ ನ್ಯಾಯಾಂಗದ ಅವಿಭಾಜ್ಯ ಅಂಗವಾಗಿ ಕಾರ್ಯಾಚರಿಸುತ್ತಿತ್ತು.
ಈ ನಿಟ್ಟಿನಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷನ ನೆಲೆಯಲ್ಲಿ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆ ಕೈಬಿಟ್ಟು, ಬ್ರಹ್ಮಾವರದಲ್ಲಿ ಪ್ರತ್ಯೇಕ ಮತ್ತು ಹೊಸ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಸ್ಥಾಪಿಸುವಂತೆ ವಿನಂತಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದ ರೆನೋಲ್ಡ್ ಪ್ರವೀಣ್ ಕುಮಾರ್, ಅದು ವಿಲೇವಾರಿಗೆ ಬಾಕಿ ಇರುವಾಗಲೇ, ರಿಟ್ ಅರ್ಜಿ ಸಲ್ಲಿಕೆಯ ಫಲಶ್ರುತಿಯಾಗಿ ಸರಕಾರ ಬ್ರಹ್ಮಾವರದಲ್ಲಿ ಹೊಸ ನ್ಯಾಯಾಲಯ ಸ್ಥಾಪನೆಗೆ ಆದೇಶಿಸಿದ್ದು, ಉಡುಪಿಯಿಂದ ಬ್ರಹ್ಮಾವರಕ್ಕೆ ನ್ಯಾಯಾಲಯ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಂಡಂತಾಗಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ ಅವರ ಪ್ರಯತ್ನ ಮತ್ತು ಸಕಾಲಿಕ ಬೆಂಬಲದಿಂದಾಗಿ ಕರ್ನಾಟಕ ಸರ್ಕಾರ ಬ್ರಹ್ಮಾವರದಲ್ಲಿ ಹೊಸ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಸ್ಥಾಪನೆಗೆ ಮಂಜೂರಾತಿ ನೀಡಿದೆ ರೆನೋಲ್ಡ್ ಪ್ರವೀಣ್ ಕುಮಾರ್ ವಿವರಿಸಿದ್ದಾರೆ.
