ಅಕ್ರಮ ಹೋಂ ಸ್ಟೇಗೆ ದಾಳಿ: ಗಾಂಜಾ, ಎಂಡಿಎಂಎ ವಶ; ಮಹಿಳೆ ಸಹಿತ 7 ಮಂದಿಯ ಬಂಧನ

ಲೋಕಬಂಧು ನ್ಯೂಸ್ | ಮಲ್ಪೆ, ಜೂ.19
ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಸಮೀಪದ ವಿಶ್ರಾಮ್ ಹೋಂ ಸ್ಟೇಗೆ ಶುಕ್ರವಾರ ಮಲ್ಪೆ ಪೊಲೀಸರು ದಾಳಿ ನಡೆಸಿ ಗಾಂಜಾ, ಎಂಡಿಎಂಎ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಓರ್ವ ಮಹಿಳೆ ಸಹಿತ ಏಳು ಮಂದಿಯನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹಾಗೂ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್ ಡಿ., ಪಿಎಸ್ಐ ಗಂಗಪ್ಪ ಎಸ್. ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿತು.


ದಾಳಿ ಸಂದರ್ಭದಲ್ಲಿ ಹೋಂ ಸ್ಟೇಯ ಒಂದು ಕೊಠಡಿಯಲ್ಲಿದ್ದ ಎಫ್.ಎಂ. ನಾಜೀಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಮತ್ತು ವಿಘ್ನೇಶ್ ಎಂಬ ನಾಲ್ವರನ್ನು ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವಿಸಿರುವುದು ಪತ್ತೆಯಾಯಿತು.


ಪಂಚರ ಸಮ್ಮುಖದಲ್ಲಿ ನಡೆಸಿದ ಶೋಧನೆಯಲ್ಲಿ 33.81 ಗ್ರಾಂ ಗಾಂಜಾ (ಅಂದಾಜು ಮೌಲ್ಯ 3 ಸಾವಿರ), 9.73 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ 20 ಸಾವಿರ), ಐದು ಮೊಬೈಲ್ ಫೋನ್‌ಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಪೊಲೀಸರ ಪ್ರಕಾರ ಮಲ್ಪೆ ಠಾಣೆ ಹಾಗೂ ಪ್ರವಾಸೋದ್ಯಮ ಇಲಾಖೆ ಹೋಂ ಸ್ಟೇ ನಡೆಸದಂತೆ ನೋಟಿಸ್ ನೀಡಲಾಗಿದ್ದರೂ, ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಹೋಂ ಸ್ಟೇ ನಡೆಸಲಾಗುತ್ತಿತ್ತು. ಅಲ್ಲದೆ, ಮಾದಕ ವಸ್ತುಗಳ ಸೇವನೆಗೆ ಅವಕಾಶ ಕಲ್ಪಿಸಿರುವ ಆರೋಪದಡಿ ಹೋಂ ಸ್ಟೇ ಮಾಲೀಕ ಧನ್ವತ್ ರಿಕ್ವಿತ್ ಹಾಗೂ ಕೆಲಸಗಾರ ಬಸವರಾಜ್ ಎಂಬೀರ್ವರನ್ನೂ ಬಂಧಿಸಲಾಗಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಗೀತಾಂಜಲಿ ಜಿನಾ ಎಂಬಾಕೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.