ಲೋಕಬಂಧು ನ್ಯೂಸ್ | ಉಡುಪಿ, ಜೂ.15
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಆ ಬಗ್ಗೆ ಜನತೆಗೆ ಉತ್ತರ ನೀಡಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತಿಲ್ಲ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಟೀಕಿಸಿದ್ದಾರೆ.
ಗೃಹಲಕ್ಷ್ಮೀ- ಗೃಹಜ್ಯೋತಿ ಮರುಅರ್ಜಿ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಶಪಾಲ್ ಸುವರ್ಣ, ಸರ್ಕಾರವೇ ರಚಿಸಿದ ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು ಮೂರು ವರ್ಷಗಳಿಂದ ಕೆಲಸ ಮಾಡಿದ್ದರೂ, ಇದೀಗ ಅವರ ಮೇಲೆಯೇ ಮುಖ್ಯಮಂತ್ರಿ ಅನುಮಾನ ವ್ಯಕ್ತಪಡಿಸುತ್ತಿರುವುದು ಆಶ್ಚರ್ಯಕರ ಬೆಳವಣಿಗೆ.
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಇಲ್ಲಸಲ್ಲದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಯೋಜನೆಗಳ ಫಲಾನುಭವಿಗಳನ್ನು ಬೀದಿಗೆ ತಳ್ಳುವ ಕೆಲಸ ನಡೆಯುತ್ತಿದೆ ಎಂದು ಯಶಪಾಲ್ ಆರೋಪಿಸಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಅದರ ಬಗ್ಗೆ ಜನರಿಗೆ ಉತ್ತರ ನೀಡಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ ಅವರು, ಮುಖ್ಯಮಂತ್ರಿ ನೇರವಾಗಿ ಮರ ಕಡಿಯುತ್ತಿಲ್ಲ. ಆದರೆ, ಗೆಲ್ಲುಗಳನ್ನು ಕಡಿದು ಕಡಿದು ಮರವೇ ಉರುಳುವಂತೆ ಮಾಡುವ ಕೆಲಸವನ್ನು ಡಿ.ಕೆ. ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸರ್ಕಾರದ ನೈಜ ಆರ್ಥಿಕ ಸ್ಥಿತಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನತೆಯ ಮುಂದಿಡಬೇಕು ಎಂದು ಯಶಪಾಲ್ ಸುವರ್ಣ ಆಗ್ರಹಿಸಿದರು
