ಭಕ್ತಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ

ಲೋಕಬಂಧು ನ್ಯೂಸ್ | ಉಡುಪಿ, ಜೂ.15
ಭಕ್ತಿಗಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ಭಕ್ತಿಯುಕ್ತವಾದ ಪೂಜೆ, ಸೇವೆ ಮತ್ತು ಪ್ರಾರ್ಥನೆ ಭಗವಂತನನ್ನು ಖಂಡಿತವಾಗಿಯೂ ಒಲಿಯುವಂತೆ ಮಾಡುತ್ತವೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಅಮೆರಿಕಾದ ಕೆನಡಾ ಟೊರೊಂಟೊ ನಗರದಲ್ಲಿ ಏರ್ಪಡಿಸಲಾದ ಪೌರಸಂಮಾನ ಸ್ವೀಕರಿಸಿ ಮಾತನಾಡಿದರು.


ದೇವರ ಅನುಗ್ರಹ ಸಂಪಾದಿಸಿದವರಿಗೆ ಅಸಾಧ್ಯ ಎಂಬುದೇ ಇಲ್ಲ. ಅದೇ ನಮ್ಮ ಎಲ್ಲ ಯಶಸ್ಸುಗಳ ಹಿಂದಿರುವ ಸತ್ಯ ಎಂದರು.


ಚತುರ್ಥ ಪರ್ಯಾಯವನ್ನು ಯಶಸ್ವಿಯಾಗಿ ನೆರವೇರಿಸಿದ ಬಳಿಕ ಮೊದಲ ಬಾರಿಗೆ ಕೆನಡಾ ದೇಶಕ್ಕೆ ಆಗಮಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಅನೇಕ ಭಕ್ತರು ಟೊರೊಂಟೊ ಮಹಾನಗರದಲ್ಲಿ ಗೌರವಾದರಗಳೊಂದಿಗೆ ಬರಮಾಡಿಕೊಂಡರು.


ಗೀತಾ ಪಾರಾಯಣ, ವೃಂದಗಾನ, ಭಜನೆ, ಭರತನಾಟ್ಯ ಮತ್ತು ವೇದಘೋಷಗಳೊಂದಿಗೆ ಸ್ವಾಗತಿಸಲಾಯಿತು.


ಬಳಿಕ ನಡೆದ ಪೌರ ಸಂಮಾನದಲ್ಲಿ ಸ್ಥಳೀಯ ಸಂಸದೆ ಮತ್ತು ಕೇಂದ್ರ ಸಚಿವೆ ಕಿಸ್ಟಿನಾ ಡೆರ್ಕ್ ಸನ್ ಅವರು ಕೆನಡಾ ಸರಕಾರದ ಪರವಾಗಿ ಶ್ರೀಗಳಿಗೆ ಅಭಿನಂದನ ಪತ್ರ ಸಮರ್ಪಿಸಿದರು.


ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿಶ್ವದಾದ್ಯಂತ ಸಂಚರಿಸಿ ಶಾಂತಿ ಮತ್ತು ಸೌಹಾರ್ದತೆ ಪಸರಿಸುತ್ತಿರುವುದು ಶ್ಲಾಘನೀಯ. ಕೆನಡಾ ದೇಶದ ಅಭಿವೃದ್ಧಿಗೆ ಸ್ಥಳೀಯ ಹಿಂದೂ ಸಮುದಾಯದ ಕೊಡುಗೆ ಅಪಾರ ಎಂದರು.


ಟೊರೊಂಟೊ ಮಹಾನಗರದ ಪುರಸಭೆಯ ಕೌನ್ಸಿಲರ್ ಜೇಸನ್ ಇದ್ದರು.


ಭಕ್ತರ ಪರವಾಗಿ ಜಗನ್ನಾಥ ರಾವ್, ರಮೇಶ್ ಬೆಂಗಳೂರು ಮತ್ತು ಜ್ಞಾನಚಂದ್ರನ್ ರಾಸಲಿಂಗಂ ಶುಭಾಶಂಸನೆಯ ಮಾತುಗಳನ್ನಾಡಿದರು. ಸುಜಾತಾ ನರಸಿಂಹ, ವೀಣಾ ಕವಳೆ, ಕಿಶೋರ್ ಶೆಟ್ಟಿ, ನಿತಿನ್ ರಾವ್ ಮೊದಲಾದವರಿದ್ದರು.


ಡಾ.ಯೋಗೀಂದ್ರ ಭಟ್ ಉಳಿ ಪ್ರಸ್ತಾವನೆಗೈದರು. ರತ್ನ ಮತ್ತು ಹರೀಶ್ ರಾವ್ ಶ್ರೀಮಠದ ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳನ್ನು ವಿವರಿಸಿದರು. ಶ್ರೀಮಠದ ಅರ್ಚಕರಾದ ರಾಘವೇಂದ್ರ ದೇಸಾಯಿ, ಸಂದೇಶ್ ಮೂಡತ್ತಾಯ ಮತ್ತು ಚಿಂತನ್ ವೇದಘೋಷಗೈದರು. ಅಕ್ಷಯ್ ನಿರೂಪಿಸಿ, ವಂದಿಸಿದರು.