ಲೋಕಬಂಧು ನ್ಯೂಸ್ | ಉಡುಪಿ, ಜೂ.26
ರಾಜ್ಯ ಸಹಕಾರ ಮಹಾಮಂಡಳ ವತಿಯಿಂದ ಜಿಲ್ಲೆಯಲ್ಲಿ ಎಲ್ಲಾ ವಗದ ಸಹಕಾರಿಗಳಿಗೆ ನಿರಂತರ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ನಿರಂತರ ಬೆಳವಣಿಗೆಗೆ ತರಬೇತಿ ಅಗತ್ಯ. ವ್ಯವಹಾರದಲ್ಲಿ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಪರಿಹರಿಸಿಕೊಳ್ಳಲು ಸದವಕಾಶ ಇದಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಬಡಗಬೆಟ್ಟು ಸೊಸೈಟಿಯಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರದಲ್ಲಿ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಜಿಲ್ಲಾ ಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ತರಬೇತಿ ಸಹಕಾರಿ. ಸಹಕಾರ ಕ್ಷೇತ್ರದಲ್ಲಿ ನಿರಂತರ ಬದಲಾವಣೆ ನಡೆಯುತ್ತಿದೆ. ಆರ್ಥಿಕ ವ್ಯವಹಾರದ ಜೊತೆಗೆ ಜನರಿಗೆ ಉಪಯುಕ್ತ ಸೇವೆಗಳನ್ನು ನೀಡಬಹುದು. ಅದರ ಆದಾಯದಿಂದಲೇ ಸಹಕಾರಿ ಸಂಸ್ಥೆ ಮುನ್ನಡೆಯುತ್ತದೆ ಎಂದರು.
ಉಪನ್ಯಾಸಕಿ ಬಿಂದು ನಾಯರ್ ತರಬೇತಿ ಕಾರ್ಯಡಗಾರ ನಡೆಸಿಕೊಟ್ಟರು.
ಸಹಕಾರ ಯೂನಿಯನ್ ನಿರ್ದೇಶಕರಾದ ಗಂಗಾಧರ ಶೆಟ್ಟಿ, ಹರೀಶ್ ಕಿಣಿ, ಸುಧೀರ್ ವೈ. ಉಪಸ್ಥಿತರಿದ್ದರು.
ಸಿಇಒ ಅನುಷಾ ಕೋಟ್ಯಾನ್ ನಿರೂಪಿಸಿದರು.
