ರಕ್ತದಾನದಲ್ಲಿ ಮುಂಚೂಣಿ ಜಿಲ್ಲೆ ಉಡುಪಿ

ಲೋಕಬಂಧು ನ್ಯೂಸ್ | ಉಡುಪಿ, ಜೂ.15
ಉಡುಪಿ ಜಿಲ್ಲೆಯಲ್ಲಿ ಅನೇಕ ಮಂದಿ ರಕ್ತದಾನಿಗಳಿದ್ದು, ಅವರಿಂದಾಗಿ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರ ಮಹತ್ವ ಪಡೆದಿದೆ. ಆ ಕಾರಣದಿಂದಲೇ ಉಡುಪಿ ರಕ್ತದಾನಿಗಳ ಜಿಲ್ಲೆ ಎಂದು ಗುರುತಿಸಲ್ಪಟ್ಟಿದೆ ಎಂದು ಕರ್ನಾಟಕ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಕುಂದಾಪುರ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಸಹಯೋಗದೊಂದಿಗೆ ಸೋಮವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿದರು.


ಮುಖ್ಯ ಅತಿಥಿಯಾಗಿದ್ದ ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಜಿಲ್ಲೆಯಲ್ಲಿ ರಕ್ತದ ತೀವ್ರ ಕೊರತೆಯಿದ್ದು ರಕ್ತದಾನದ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎಂದರು.


ಜಿಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲ್ಯಾಣಾಧಿಕಾರಿ ರತ್ನ ಸುವರ್ಣ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಹಲವು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ ಸುಕನ್ಯ ಎಂ. ಕಳಸ, ಅಕ್ಷತ್ ನಾಯಕ್, ವಿಶ್ವನಾಥ ನಾಯಕ್, ರಘುರಾಮ್, ಶಿವಕುಮಾರ್ ಶೆಟ್ಟಿಗಾರ್ ಮತ್ತು ರಮೇಶ್ ಕರ್ಕೇರ ಅವರನ್ನು ಗೌರವಿಸಲಾಯಿತು. ಸುಕನ್ಯ ಎಂ. ಕಳಸ ಮತ್ತು ಶಿವಕುಮಾರ್ ಶೆಟ್ಟಿಗಾರ್ ಸನ್ಮಾನಿತರ ಪರವಾಗಿ ಮಾತನಾಡಿ, ರಕ್ತದಾನದ ಬಗ್ಗೆ ಅನುಭವ ಹಂಚಿಕೊಂಡರು.


ಜಿಲ್ಲಾ ರೆಡ್ ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ., ಆಡಳಿತ ಮಂಡಳಿ ಸದಸ್ಯ ಟಿ.ಚಂದ್ರಶೇಖರ್ ಇದ್ದರು.


ಲೊಂಬಾರ್ಡ್ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿದರು. ರೆಡ್ ಕ್ರಾಸ್ ಸದಸ್ಯ ಪ್ರೊ. ದಯಾನಂದ ಡಿ. ನಿರೂಪಿಸಿ, ಖಜಾಂಚಿ ರಮಾದೇವಿ ವಂದಿಸಿದರು.