ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್'ಗೆ ಅಮೆರಿಕಾದ ಪ್ರತಿಷ್ಠಿತ ಪಿಪಿಎಸ್ಎ ಗೌರವ

ಲೋಕಬಂಧು ನ್ಯೂಸ್ | ಉಡುಪಿ, ಜೂ.18
ಹಿರಿಯ ಛಾಯಾಚಿತ್ರ ಪತ್ರಕರ್ತ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಅವರಿಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಛಾಯಾಗ್ರಹಣ ಸಂಸ್ಥೆಗಳಲ್ಲಿ ಒಂದಾದ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾ (ಪಿಎಸ್‌ಎ)ದ ಪ್ರತಿಷ್ಠಿತ ಪಿಪಿಎಸ್ಎ (ಪ್ರೊಫಿಷಿಯನ್ಸಿ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾ) ಗೌರವ ಲಭಿಸಿದೆ.
ವಿಶ್ವದಾದ್ಯಂತ ಪಿಎಸ್‌ಎ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ನಿರಂತರವಾಗಿ ಉತ್ಕೃಷ್ಟ ಸಾಧನೆ ಮತ್ತು ಗಮನಾರ್ಹ ಯಶಸ್ಸು ದಾಖಲಿಸಿರುವ ಛಾಯಾಗ್ರಾಹಕರಿಗೆ ಈ ಗೌರವ ನೀಡಲಾಗುತ್ತದೆ.


ಸುಮಾರು ಮೂರು ದಶಕಗಳಿಗೂ ಅಧಿಕ ಅವಧಿಯಿಂದ ಛಾಯಾಚಿತ್ರ ಪತ್ರಿಕೋದ್ಯಮ ಹಾಗೂ ದೃಶ್ಯ ಕಥನ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಆಸ್ಟ್ರೋ ಮೋಹನ್, ಕರ್ನಾಟಕದ ಹೆಸರಾಂತ ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದಾರೆ.


ಸಮಾಜದ ವಿವಿಧ ಆಯಾಮಗಳು, ಮಹತ್ವದ ಘಟನೆಗಳು, ಮಾನವೀಯ ಬದುಕಿನ ಸ್ಪಂದನೆ, ಸಂಸ್ಕೃತಿ, ಆಧ್ಯಾತ್ಮ, ಕ್ರೀಡೆ ಹಾಗೂ ಸಾಮಾಜಿಕ ವಾಸ್ತವಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸಿರುವ ಅವರು, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರಶಂಸೆ ಹಾಗೂ ಮಾನ್ಯತೆ ಗಳಿಸಿದ್ದಾರೆ.


ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾದ ಈ ಪ್ರತಿಷ್ಠಿತ ಗೌರವ ಕರ್ನಾಟಕದ ಅತ್ಯಲ್ಪ ಪತ್ರಿಕಾ ಛಾಯಾಗ್ರಾಹಕರು ಪಡೆದಿರುವುದು ಅವರ ಈ ಸಾಧನೆಗೆ ಇನ್ನಷ್ಟು ಮಹತ್ವ ತಂದುಕೊಟ್ಟಿದೆ.


ಅಸ್ಟ್ರೋ ಮೋಹನ್ ಅವರು ಪ್ರಸ್ತುತ ಉದಯವಾಣಿಯಲ್ಲಿ ಹಿರಿಯ ಛಾಯಾಚಿತ್ರ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಛಾಯಾಗ್ರಹಣ ಶಿಕ್ಷಣ, ದೃಶ್ಯ ದಾಖಲಾತಿ ಯೋಜನೆ, ಸ್ಮರಣಿಕಾ ಗ್ರಂಥಗಳ ರಚನೆ, ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳು ಹಾಗೂ ಯುವ ಛಾಯಾಗ್ರಾಹಕರ ಮಾರ್ಗದರ್ಶನ ಕ್ಷೇತ್ರಗಳಲ್ಲಿಯೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.


ಅವರಿಗೆ ಲಭಿಸಿರುವ ಪ್ರಮುಖ ಗೌರವಗಳಲ್ಲಿ ಪಿಪಿಎಸ್ಎ, ಎಪಿಎಸ್ಎ, ಎಎಫ್‌ಐಎಪಿ, ಹಾನ್.ಎಫ್‌ಎಸ್‌ವಾನ್, ಹಾನ್.ಇಯುಎಸ್‌ಪಿಎ, ಹಾನ್.ಎಫ್‌ಐಸಿಎಸ್, ಎಫ್‌ಐಐಪಿಸಿ, ಎಎಫ್‌ಐಪಿ, ಎಎಸ್‌ಒಎಫ್ ಹಾಗೂ ಎಪಿಸಿಎ ಸೇರಿವೆ.