ವಚನ ಸಾಹಿತ್ಯ ಉಳಿವಿಗೆ ಫ.ಗು.ಹಳಕಟ್ಟಿ ಅವಿರತ ಶ್ರಮ

ಲೋಕಬಂಧು ನ್ಯೂಸ್ | ಮಣಿಪಾಲ, ಜು.3
ಕಲ್ಯಾಣ ಕ್ರಾಂತಿಯ ನಂತರ ನಶಿಸಿಹೋಗುತ್ತಿದ್ದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಹಲವಾರು ಶರಣರು ರಚಿಸಿದ ಸಾವಿರಾರು ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಅವುಗಳನ್ನು ಮುದ್ರಿಸುವ ಮೂಲಕ ವಚನ ಸಾಹಿತ್ಯ ಇಂದಿಗೂ ಜನಮಾನಸದಲ್ಲಿ ಉಳಿಯುವಂತೆ ಮಾಡಿದ ಫ.ಗು.ಹಳಕಟ್ಟಿ ಶ್ರಮ ಅಪಾರ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಡಾ.ಫ.ಗು. ಹಳಕಟ್ಟಿ ಜನ್ಮದಿನ- ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ, ಡಾ.ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ವಚನಗಳು ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಬೇರೂರಿದ್ದ ಸತಿ ಸಹಗಮನ ಪದ್ಧತಿ, ಅಸ್ಪೃಶ್ಯತೆ, ಜಾತಿ ಪದ್ಧತಿ ಸೇರಿದಂತೆ ಹಲವು ಮೌಢ್ಯಗಳನ್ನು ಹೋಗಲಾಡಿಸುವುದರೊಂದಿಗೆ ಸ್ತ್ರೀ ಸಮಾನತೆಗೆ ಒತ್ತುನೀಡಿದ್ದವು. ಸಮಾಜ ಸುಧಾರಣೆಗೆ ದಾರಿಯಾಗಿದ್ದ ವಚನಗಳನ್ನು ಯುವಜನತೆ ಓದಿ, ಅರ್ಥೈಸಿಕೊಳ್ಳುವುದರೊಂದಿಗೆ ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, 12ನೇ ಶತಮಾನದಲ್ಲಿ ಶಿವಶರಣರಿಂದ ರಚನೆಗೊಂಡು ಕಲ್ಯಾಣ ಕ್ರಾಂತಿಯ ನಂತರ ಚದುರಿಹೋಗಿದ್ದ ವಚನ ಸಾಹಿತ್ಯಗಳನ್ನು ಫ.ಗು. ಹಳಕಟ್ಟಿಯವರು ಅಂದು ರಕ್ಷಿಸದೇ ಹೋಗಿದ್ದರೆ ಇಂದು ಕನ್ನಡ ಸಾಹಿತ್ಯ ಇಷ್ಟು ಶ್ರೀಮಂತವಾಗಿ ಉಳಿಯುತ್ತಿರಲಿಲ್ಲ.


ವಕೀಲ ವೃತ್ತಿಯಿಂದ ಬಂದ ಆದಾಯವನ್ನೆಲ್ಲಾ ವಚನ ಸಾಹಿತ್ಯದ ಸಂರಕ್ಷಣೆ, ಪ್ರಚಾರಕ್ಕೆ ಮುಡಿಪಾಗಿಟ್ಟ ಅವರು ಅವುಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ವರ್ಗೀಕರಿಸದೆ ಇದ್ದಲ್ಲಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರಲಿಲ್ಲ ಎಂದರು.


ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪನ್ಯಾಸ ನೀಡಿ, ಪವಾಡ ಸದೃಶ ಕಾರ್ಯ, ತ್ಯಾಗ, ಸೇವೆಗಳ ಮೂಲಕ ನಾಡಿನ ಚರಿತ್ರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಫ.ಗು. ಹಳಕಟ್ಟಿಯವರು 'ವಚನ ಪಿತಾಮಹ' ಎಂದೇ ಪ್ರಖ್ಯಾತರು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ನಾಡು, ನುಡಿ ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದರು.


ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಯು.ಸಿ.ನಿರಂಜನ್ ಶುಭ ಹಾರೈಸಿದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು, ಕನ್ನಡ ಉಪನ್ಯಾಸಕ ರಾಮಾಂಜಿ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ಬಿ. ಕೋಟ್ಯಾನ್ ನಿರೂಪಿಸಿದರು. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ವಂದಿಸಿದರು.