ಲೋಕಬಂಧು ನ್ಯೂಸ್ | ಕಾಪು, ಜು.3
ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆ ಮೂಲಕ ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಂಡಲ್ಲಿ ಭವಿಷ್ಯದಲ್ಲಿ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಸೋದೆ ವಾದಿರಾಜ ಮಠ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಐತಾಳ್ ಹೇಳಿದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಇನ್ನಂಜೆ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ದಾಸ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತ ದಿ.ಬಿ. ಜಯಂತ್ ಪಡುಬಿದ್ರಿ ಸಂಸ್ಮರಣೆ ಹಾಗೂ ದತ್ತಿನಿಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಾನಪದ ಚಿಂತಕ ಡಾ.ವೈ.ಎನ್. ಶೆಟ್ಟಿ ಅವರು ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ವಿತರಿಸಿ, ಪ್ರಸ್ತುತ ಪತ್ರಿಕೋದ್ಯಮ ಕ್ಷೇತ್ರ ಅಗಾಧವಾಗಿ ಬೆಳೆಯುತ್ತಿದೆ. ಈ ರಂಗಕ್ಕೆ ಹೊಸದಾಗಿ ಸೇರ್ಪಡೆಯಾದ ಸಾಮಾಜಿಕ ಮಾಧ್ಯಮಗಳೂ ಪೈಪೋಟಿ ನೀಡುತ್ತಿವೆ ಎಂದರು.
'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ವರದಿಗಾರ ಜಾನ್ ಡಿ'ಸೋಜ ಕುಂದಾಪುರ ಅವರು 'ಪತ್ರಿಕೋದ್ಯಮ ಮತ್ತು ವಿದ್ಯಾರ್ಥಿಗಳ ಪಾತ್ರ' ಕುರಿತು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಪುಸ್ತಕ ಓದುವ ಮಾಡುವ ಮೂಲಕ ಜೀವನ ಪಾಠ ಕಲಿಯಬೇಕು ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಕಾರ್ಯದರ್ಶಿ ಸುರೇಶ್ ಎರ್ಮಾಳು, ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಮಂಗಳ ಶಿರ್ವಪದವು ಅವರಿಗೆ ದತ್ತಿನಿಧಿ ಹಾಗೂ ಇನ್ನಂಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಮೀದ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಮಿತಿ ಸದಸ್ಯ ಹರೀಶ್ ಹೆಜಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ ಸ್ವಾಗತಿಸಿದರು. ಪ್ರಕಾಶ ಸುವರ್ಣ ಕಟಪಾಡಿ ನಿರೂಪಿಸಿದರು. ಕೋಶಾಧಿಕಾರಿ ಸಂತೋಷ್ ಕಾಪು ವಂದಿಸಿದರು.
.jpg)
.jpg)
.jpg)