ಲೋಕಬಂಧು ನ್ಯೂಸ್ ಬೆಂಗಳೂರು, ಆ.6
ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ವಂಚಿತವಾಗಿದ್ದು, ಈ ಸಮುದಾಯಕ್ಕೂ ಸಚಿವ ಸ್ಥಾನ ಕೊಡಿ ಎಂದು ಗುರುವಾರ ಇಲ್ಲಿನ ಫ್ರೀಡಂ ಪಾರ್ಕ್ ಅವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಒಕ್ಕೊರಳಿನಿಂದ ಆಗ್ರಹಿಸಲಾಯಿತು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಮಾತನಾಡಿ, ಕಳೆದ 70 ವರ್ಷದಲ್ಲಿ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನ ವರೆಗೆ ಬ್ರಾಹ್ಮಣರು ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಸಹಕರಿಸಿದ್ದಾರೆ.
ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸಚಿವ ಸ್ಥಾನ ಸಿಗದಿರುವುದು ಅನ್ಯಾಯ. ನಮ್ಮ ಸಮುದಾಯವನ್ನು ಕಡೆಗಣಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬ್ರಾಹ್ಮಣ ಸಮುದಾಯದವರು ಇದ್ದಾರೆ. ಅವರ ಪೈಕಿ ಯಾರಿಗಾದರೂ ಸಚಿವ ಸ್ಥಾನ ನೀಡಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಹಾಸಭಾದ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ಬ್ರಾಹ್ಮಣರ ಸಂಖ್ಯೆ ಕಡಿಮೆ ಇದೆ ಎಂದು ಕಡಗಣನೆ ಮಾಡಬೇಡಿ. ಆರ್.ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು.
ಬ್ರಾಹ್ಮಣರು ಶುದ್ದ ಚಾರಿತ್ರ್ಯವುಳ್ಳವರಾಗಿದ್ದು, ಅವರಿಗೆ ಸಚಿವ ಸ್ಥಾನ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.
ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ನಮ್ಮ ಸಮಾಜ ತೀರ್ಮಾನ ತೆಗೆದುಕೊಂಡರೆ ರಾಷ್ಟ್ರ ಮಟ್ಟದಲ್ಲಿ ಭಾರೀ ಬದಲಾವಣೆ ಸಾಧ್ಯ ಎಂದು ಎಚ್ಚರಿಸಿದರು.
ಪ್ರತಿಯೊಂದು ಜಾತಿಯವರಿಗೂ ಅವಕಾಶ ಕೊಡಿ. ಬ್ರಾಹ್ಮಣ ಸಮಾಜಕ್ಕೆ ಒಂದು ಸಚಿವ ಸ್ಥಾನವನ್ನಾದರೂ ನೀಡಿ ಎಂದು ಮುಖ್ಯಮಂತ್ರಿಗೆ ಸಲಹೆ ನೀಡಿದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಆರ್.ಗುಂಡೂರಾವ್ ಮುಖ್ಯಮಂತ್ರಿ ಅವಧಿಯಲ್ಲಿ ಬಡವರಿಗೆ ಭಾಗ್ಯಜ್ಯೋತಿ ಜಾರಿಗೆ ತರಲಾಗಿತ್ತು. ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದರು.
ಸಮಾಜಕ್ಕೆ ಬ್ರಾಹ್ಮಣರು ಅನಿವಾರ್ಯವಾಗಿದ್ದು, ಅವರು ಸಮಾಜ ಕಟ್ಟುವ ಕೆಲಸ ಮಾಡುತ್ತಾರೆ. ಬ್ರಾಹ್ಮಣರು ಜಾತ್ಯತೀತ ವಾದಿಗಳು ಎಂದರು.ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಅಗಮಿಕರ ಉಪಾಧಿಯಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್.ದೀಕ್ಷಿತ್, ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ಜಿಲ್ಲಾ ಪ್ರತಿನಿಧಿಗಳಾದ ಪಿ.ಆರ್.ಪ್ರಕಾಶ್, ಕೆ.ಎನ್.ರವಿಕುಮಾರ್, ನಾಗೇಶ್, ದಿಲೀಪ್, ಸತೀಶ್ ಉರಾಳ್ ಮತ್ತು ಮಂಜುನಾಥ್, ಬ್ರಾಹ್ಮಣ ಸಮುದಾಯದ ಮುಖಂಡರಾದ ಎಲ್.ಜಯಸಿಂಹ ಭಾರದ್ವಾಜ್, ನಾಗಭೂಷಣ ರಾವ್ ಸೇರಿದಂತೆ ಬ್ರಾಹ್ಮಣ ಮಹಾಸಭಾದ ಸದಸ್ಯರು, ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಮೊದಲಾದ ಜಿಲ್ಲೆಗಳಿಂದ ತ್ರಿಮತಸ್ಥ ಬ್ರಾಹ್ಮಣ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.