ಲೋಕಬಂಧು ನ್ಯೂಸ್ | ಉಡುಪಿ, ಜು.7
ನೀಲಾವರ ಮತ್ತು ಕೊಡವೂರು ಗೋಶಾಲೆಗಳಲ್ಲಿ ಗೋಗ್ರಾಸ ಸೇವೆಯನ್ನು ಗೋವರ್ಧನಗಿರಿ ಟ್ರಸ್ಟ್ ಅಧ್ಯಕ್ಷರಾಗಿರುವ ಪೇಜಾವರ ಶ್ರೀ ವಿಶ್ಚಪ್ರಸನ್ನತೀರ್ಥ ಶ್ರೀಪಾದರ ಸಮ್ಮತಿ ಹಾಗೂ ಆಶೀರ್ವಾದದಿಂದಲೇ ನಡೆಸಲಾಗುತ್ತಿದೆ ಎಂದು ಗೋಗ್ರಾಸ ಸೇವೆ ತಂಡದ ಪ್ರಮುಖ, ಭಾರತೀಶ ಜ್ಯುವೆಲ್ಲರ್ಸ್'ನ ಶಶಿಧರ ಭಟ್ ತಿಳಿಸಿದ್ದಾರೆ.
ಶ್ರೀಪಾದರಿಗೆ ಮಾಹಿತಿ ನೀಡದೇ ಶ್ರೀಗಳ ಭಾವಚಿತ್ರ ಹಾಗೂ ಶ್ರೀಮಠವನ್ನು ಉಲ್ಲೇಖಿಸಿ ಗೋಸೇವೆಗಾಗಿ ಹಣ ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ರಸ್ಟ್ ಸದಸ್ಯತ್ವದಿಂದ ಶಶಿಧರ ಭಟ್ ಅವರನ್ನು ವಜಾಗೊಳಿಸಲಾಗಿದೆ ಎಂಬ ಹೇಳಿಕೆ ನೀಡಿರುವ ಇನ್ನೋರ್ವ ಟ್ರಸ್ಟಿ ಲಕ್ಷ್ಮೀನಾರಾಯಣ ರಾವ್ ಕ್ರಮವನ್ನು ಆಕ್ಷೇಪಿಸಿ ಸ್ಪಷ್ಟನೆ ನೀಡಿದ್ದಾರೆ.
ಶಶಿಧರ ಭಟ್ ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 'ನೀಲಾವರ ಗೋಗ್ರಾಸ ಸೇವಾ ತಂಡ ಸ್ವಯಂಸೇವಕರ ತಂಡವಾಗಿದ್ದು, ಗೋಸೇವಾ ಪರಮೋ ಧರ್ಮಃ ಎಂಬ ತತ್ವದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡವರ ಒಂದು ಗುಂಪು. ಆ ತಂಡ ನೀಲಾವರ ಮತ್ತು ಕೊಡವೂರಿನ ಗೋಶಾಲೆಗಳಲ್ಲಿ ಸೇವೆ ಮಾಡಲು ಇಚ್ಛಿಸುವವರಿಗೆ ಸಹಾಯ ಮಾಡುವ ಮೂಲಕ ಗೋ ಸೇವೆಗೆ ಸಾರ್ವಜನಿಕರನ್ನು ಪ್ರೇರೇಪಿಸುವುದು ಮತ್ತು ಗೋಶಾಲೆ ನಡೆಸಲು ಬೇಕಾದ ಸೌಕರ್ಯಗಳನ್ನು ಕಲ್ಪಿಸಿಕೊಡುವ ಸದುದ್ದೇಶದಿಂದ ಪ್ರಾರಂಭಿಸಲಾಗಿದೆ.
ಈ ಆಶಯದ ತಂಡವನ್ನು ಪ್ರಾರಂಭಿಸುವಾಗಲೇ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಮ್ಮತಿ ಪಡೆಯಲಾಗಿದೆ ಹಾಗೂ ನಮ್ಮ ಚಟುವಟಿಕೆಗಳನ್ನು ಅವರ ಒಪ್ಪಿಗೆಯಿಂದಲೇ ನಡೆಸಿ ಶ್ರೀಗಳಿಗೆ ಎಲ್ಲಾ ಚಟುವಟಿಕೆಗಳ ವಿವರಗಳನ್ನು ಕಾಲ-ಕಾಲಕ್ಕೆ ನೀಡುತ್ತಾ ಬಂದಿದ್ದೇವೆ.
ನಮ್ಮ ತಂಡ ನಡೆಸಿದ ಪ್ರತಿಯೊಂದು ಕಾರ್ಯ ಚಟುವಟಿಕೆಗಳ ಸಂಪೂರ್ಣ ಲೆಕ್ಕಾಚಾರ ಇಟ್ಟುಕೊಂಡಿದ್ದು, ಗೋಸೇವೆಗಾಗಿ ಮಾತ್ರ ಅದನ್ನು ವಿನಿಯೋಗಿಸಲಾಗುತ್ತದೆ. ಸಂಗ್ರಹಿಸಿದ ಮೊತ್ತದಿಂದ ಗೋಗ್ರಾಸ ಸೇವೆಗೆ ಬೇಕಾದ ಪಾತ್ರೆಗಳು, ಹಿಂಡಿ ಇತ್ಯಾದಿ ಖರ್ಚು-ವೆಚ್ಚಗಳಿಗೆ ಮಾತ್ರ ಬಳಸಿ, ಉಳಿಕೆ ಮೊತ್ತವನ್ನು ಈಗಾಗಲೇ ಗೋವರ್ಧನ ಗಿರಿ ಟ್ರಸ್ಟ್‌ನ ಖಾತೆಗೆ ವರ್ಗಾಯಿಸಲಾಗಿದೆ. ನಮ್ಮ ತಂಡದ ಅವಿರತ ಚಟುವಟಿಕೆಗಳಿಗೆ ಸಾರ್ವಜನಿಕರು, ಗೋಪ್ರಿಯರು ಮೆಚ್ಚುಗೆ ಸೂಚಿಸಿ, ಈ ಸೇವಾ ಕೈಂಕರ್ಯಕ್ಕೆ ನಮ್ಮನ್ನು ಸಂಪರ್ಕಿಸಲು ಪ್ರಾರಂಭಿಸಿದರು.
ಆ ಸಂದರ್ಭದಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ವಿನಾಕಾರಣ ನಮ್ಮ ತೇಜೋವಧೆ ಮಾಡಿ ಅಪಪ್ರಚಾರದ ಸುದ್ದಿಗಳನ್ನು ಹರಡಿ ನನ್ನ ಹಾಗೂ ನಮ್ಮ ತಂಡದ ವಿರುದ್ಧ ವಿನಾಕಾರಣ ಈ ವಿಷಯದಲ್ಲಿ ವೈಯಕ್ತಿಕ ನಿಂದನೆ ಹಾಗೂ ನಾನು ಪಾಲುದಾರನಾಗಿರುವ ನಮ್ಮ ವ್ಯಾವಹಾರಿಕ ಸಂಸ್ಥೆಯ ಹೆಸರನ್ನು ಎಳೆದು ತಂದು ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ.
ನಾನು ಹಾಗೂ ನಮ್ಮ ಗೋಗ್ರಾಸ ಸೇವಾ ತಂಡ ಪೇಜಾವರ ಮಠಕ್ಕಾಗಲೀ, ಪೇಜಾವರ ಶ್ರೀಗಳಿಗಾಗಲೀ ನೀಲಾವರ ಮತ್ತು ಕೊಡವೂರು ಗೋಶಾಲೆಗಾಗಲೀ ಯಾವುದೇ ಮೋಸ, ವಂಚನೆ ಅಥವಾ ದ್ರೋಹ ಎಸಗಿಲ್ಲ. ಗೋಸೇವೆಯೇ ನಮ್ಮ ಧ್ಯೇಯ ಎಂದು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಗೋಸೇವೆಯನ್ನು ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ಆರಾಧನೆ ಎಂದೇ ಭಾವಿಸಿ ಮುನ್ನಡೆಯುತ್ತೇವೆ.
ನಮ್ಮ ಸೇವಾತತ್ಪರತೆ ಹಾಗೂ ಪಾರದರ್ಶಕತೆಯನ್ನು ಯಾವುದೇ ಸ್ಥಳ ಅಥವಾ ವ್ಯಕ್ತಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಲು ಸಿದ್ಧರಿದ್ದೇವೆ' ಎಂದು ಶಶಿಧರ್ ಭಟ್ ತಿಳಿಸಿದ್ದಾರೆ.

