ಲೋಕಬಂಧು ನ್ಯೂಸ್ ಮಲ್ಪೆ, ಆ.7
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.ಕಲ್ಮಾಡಿ ನಿವಾಸಿ ರತ್ನ ಅವರ ಪುತ್ರಿ ಕೃತಿ ಬಂಗೇರ (27) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಕೃತಿ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಕಡಿಯಾಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಳೆದ ಸುಮಾರು ಐದು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು ಎನ್ನಲಾಗಿದೆ.
ಗುರುವಾರ ತಾಯಿ ರತ್ನ ಅವರು ಕೆಲಸದ ನಿಮಿತ್ತ ಮಲ್ಪೆಗೆ ತೆರಳಿದ್ದು ಎರಡನೇ ಪುತ್ರಿಯೂ ಕೆಲಸದ ಹಿನ್ನೆಲೆಯಲ್ಲಿ ಉಡುಪಿಗೆ ಹೋಗಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ಮನೆಗೆ ಹಿಂದಿರುಗಿದ ವೇಳೆ, ಕೃತಿ ತಾಯಿಯನ್ನು ಮನೆಯ ಹೊರಗೆ ಕಳುಹಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು, ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರತ್ನ ಅವರು ತನ್ನ ಸಹೋದರ ಚಂದ್ರ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರಮಾಡಿಕೊಂಡರು.
ಬಳಿಕ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ, ಬೆಡ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃತಿ ಕಳೆದ ಹಲವಾರು ದಿನಗಳಿಂದ ಒತ್ತಡದಲ್ಲಿದ್ದು, ಅದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.