ಸಾಧಕನ ಸಾಧನೆಗೆ ಗುರು ಪೂರಕ

ಲೋಕಬಂಧು ನ್ಯೂಸ್ | ಕಾರ್ಕಳ, ಸೆ.6
ವಿದ್ಯಾರ್ಥಿ ಜೀವನ ಉತ್ತಮಗೊಳ್ಳಲು ಗುರುಗಳ ಮಾರ್ಗದರ್ಶನ ಆವಶ್ಯಕ. ಸಾಧಕನೋರ್ವನ ಸಾಧನೆಯ ಹಿಂದಿನ ಗುಟ್ಟು ಶಿಕ್ಷಕನೇ ಆಗಿರುತ್ತಾನೆ ಮಣಿಪಾಲ ಮಾಹೆ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಡಿಪಾರ್ಟ್'ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಫ್ರೊಫೆಸರ್ ಹಾಗೂ ಮುಖ್ಯಸ್ಥ ಡಾ.ಕಲ್ಯಾಣ ಪೆಂಟಪತಿ ಹೇಳಿದರು.
ಇಲ್ಲಿನ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ತಾಲೂಕಿನ ಐವರು ನಿವೃತ್ತ ಶಿಕ್ಷಕರನ್ನು ಗೌರವಿಸಿ, ಮಾತನಾಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಮಾತನಾಡಿ, ನಮ್ಮ ಬದುಕಿನಲ್ಲಿ ನಡೆದು ಬಂದ ಹಾದಿಯಲ್ಲಿ ಪ್ರಾಥಮಿಕ ಶಿಕ್ಷಕರ ಪಾತ್ರ ಬಹುದೊಡ್ಡದು. ಅವರ ತ್ಯಾಗ ಮತ್ತು ಸಹನಶೀಲತೆ ಎಲ್ಲರಿಗೂ ಮಾದರಿ ಎಂದರು.


ಶಿರ್ಲಾಲು ಎನ್.ಎನ್.ರಾವ್ ಮೆಮೊರಿಯಲ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ರಾಮಕೃಷ್ಣ ಹೆಬ್ಬಾರ್, ಎಣ್ಣೆಹೊಳೆ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಚಂಪಾ ಡಿ. ಹೆಗ್ಡೆ, ಮಿಯ್ಯಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ, ರೆಂಜಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ದೈಹಿಕ ಶಿಕ್ಷಕ ಅಣ್ಣಿ ಎಮ್. ಹಾಗೂ ಶಿರ್ಲಾಲು ಸೂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ದೈಹಿಕ ಶಿಕ್ಷಕಿ ಶಶಿಕಲಾ ದೇವಿ ಅವರನ್ನು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.


ಸನ್ಮಾನಿತರಾದ ನಿವೃತ್ತ ಶಿಕ್ಷಕ ರಾಮಕೃಷ್ಣ ಹೆಬ್ಬಾರ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಮಾತನಾಡಿದರು.


ಟ್ರಸ್ಟಿಗಳಾದ ವಿದ್ಯಾವತಿ ಎಸ್. ಶೆಟ್ಟಿ ಹಾಗೂ ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲಾ ಉಪ ಪ್ರಾಂಶುಪಾಲೆ ವಾಣಿ ಕೆ, ಕಾರ್ಕಳ ಜ್ಞಾನಸುಧಾ ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಹಾಗೂ ಸಂಸ್ಥೆಯ ಹಿತೈಷಿ ಅಪ್ಪೂರಾಯ ಕಿಣಿ ಉಪಸ್ಥಿತರಿದ್ದರು.


ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಸ್ವಾಗತಿಸಿ, ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.