ಲೋಕಬಂಧು ನ್ಯೂಸ್ | ಉಡುಪಿ, ಸೆ.3
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ- ಉಡುಪಿಗೆ ಆಧ್ಯಾತ್ಮಿಕ ಸಂಭ್ರಮದ ಸಮಯ. ದ್ವೈತಮತ ಪ್ರತಿಪಾದಕ ಆಚಾರ್ಯ ಮಧ್ವ ಕರಾರ್ಚಿತ ಜಗದೊಡೆಯ ಶ್ರೀಕೃಷ್ಣನ ಜನ್ಮಾಷ್ಟಮಿಗೆ ಮಠದ ವರ್ತುಲದಲ್ಲಿ ಸಾಂಪ್ರದಾಯಿಕ- ಸಾಂಸ್ಕೃತಿಕ ಸಡಗರ.
ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ಶ್ರೀಕೃಷ್ಣ ಜನ್ಮಾಷ್ಟಮಿ ಈ ಬಾರಿಯ ವಿಶೇಷ. ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಸಂಕಲ್ಪ ಶ್ರೀಗಳದ್ದು. ಅದಕ್ಕಾಗಿ ಸರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಷಣಗಣನೆ ಆರಂಭವಾಗಿದೆ.
ಮಧ್ಯರಾತ್ರಿ ಅರ್ಘ್ಯ ಪ್ರದಾನ
ಸೆ.4ರ ರಾತ್ರಿ ಚಂದ್ರೋದಯ 12.12ಕ್ಕೆ ರೋಹಿಣಿ ನಕ್ಷತ್ರದ ಸಹಯೋಗ. ಆ ಸಮಯದಲ್ಲೇ ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಕೃಷ್ಣನಿಗೆ ಮಹಾಪೂಜೆ- ಕೃಷ್ಣಾಘ್ರ್ಯ ಪ್ರದಾನ. ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಭಕ್ತರಿಗೂ ಕೃಷ್ಣಾರ್ಘ್ಯ ಸಮರ್ಪಿಸುವ ಸದವಕಾಶ.
ಕೃಷ್ಣ ಜನ್ಮಾಷ್ಟಮಿಯ ಮರುದಿನ ವಿಟ್ಲಪಿಂಡಿ- ಕೃಷ್ಣಲೀಲೋತ್ಸವ. ಅಪರಾಹ್ನ 3 ಗಂಟೆಯ ಸುಮಾರಿಗೆ ಚಿನ್ನದ ರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯ ರಥೋತ್ಸವ. ಗೊಲ್ಲರಿಂದ ಸಾಂಪ್ರದಾಯಿಕ ಮೊಸರುಕುಡಿಕೆ, ಜಾನಪದೀಯ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ವಿಶೇಷ ಆಕರ್ಷಣೆ. ಈ ಬಾರಿ ಪರ್ಯಡಯ ಶ್ರೀಪಾದರ ಆಶಯದಂತೆ ಶೀರೂರು ಮಠದ ಮುಂಭಾಗದ ವಿಶೇಷ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ.
ಲಕ್ಷ ಸಂಖ್ಯೆಯಲ್ಲಿ ಉಂಡೆ- ಚಕ್ಕುಲಿ
ವಿಟ್ಲಪಿಂಡಿಯ ದಿನ ಮಹಾಪೂಜೆಯ ಬಳಿಕ ಊರ-ಪರವೂರ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ಜೊತೆಗೆ ವಿಶೇಷ ಖಾದ್ಯಗಳ ಪ್ರಸಾದ ವಿತರಣೆ. ಅದಕ್ಕಾಗಿ ಸುಮಾರು 2.5 ಲಕ್ಷದಷ್ಟು ಚಕ್ಕುಲಿ, ತಲಾ 50 ಸಾವಿರದಷ್ಟು ಐದು ಬಗೆಯ ವಿವಿಧ ಉಂಡೆಗಳು ಸಿದ್ಧಗೊಂಡಿವೆ.
ಅವುಗಳಲ್ಲಿ ಗುಂಡ್ಹಿಟ್ಟು, ಎಳ್ಳುಂಡೆ, ಅರಳುಂಡೆ, ನೆಲಗಡಲೆ ಉಂಡೆ ಹಾಗೂ ರವಾಲಾಡು ಇವೆ. ಸುಮಾರು 20 ಕ್ವಿಂಟಾಲ್ ಬೆಲ್ಲ ಮತ್ತು 7 ಕ್ವಿಂಟಾಲ್ ಸಕ್ಕರೆ ಬಳಸಿದ ವಿವಿಧ ಭಕ್ಷ್ಯಭೋಜ್ಯಗಳು ಆ ದಿನದ ಪ್ರಸಾದದ ವಿಶೇಷ. ಅಲ್ಲದೆ, ಸ್ಥಳೀಯ ಶಾಲೆಗಳಿಗೂ ಜನ್ಮಾಷ್ಟಮಿ ಪ್ರಸಾದ ವಿತರಿಸಲಾಗುವುದು. ಅದಕ್ಕಾಗಿ ಸುಮಾರು 80 ಮಂದಿ ಬಾಣಸಿಗರು ಉಂಡೆ-ಚಕ್ಕುಲಿ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಮಠದ ಕೊಟ್ಟಾರಿಗಳಾದ ರಾಮಚಂದ್ರ ಕೊಡಂಚ ಹಾಗೂ ಗೋವಿಂದರಾಜ್ ತಿಳಿಸಿದ್ದಾರೆ.
ಹುಲಿವೇಷ
ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿ, ಕಳೆದ ಒಂದು ತಿಂಗಳಿನಿಂದ 'ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ' ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕ ಭಕ್ತರಿಗೆ ಹಾಗೂ ಮಠದ ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿದ್ದು ಹುಲಿವೇಷ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಸಾಂಪ್ರದಾಯಿಕ ಹುಲಿವೇಷ ಸ್ಪರ್ಧೆ ವಿಜೇತರಿಗೆ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಒಂದು ಲಕ್ಷ ರೂ.ಗಳ ಬಹುಮಾನ ಪ್ರಕಟಿಸಿದ್ದಾರೆ.
ಮೃಣ್ಮಯ ಮೂರ್ತಿ
ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಕೃಷ್ಣನ ಉತ್ಸವ ಮೂರ್ತಿ ಗರ್ಭಗುಡಿಯಿಂದ ಹೊರತರುವಂತಿಲ್ಲ. ಆ ನಿಟ್ಟಿನಲ್ಲಿ ವಿಟ್ಲಪಿಂಡಿಯ ರಥೋತ್ಸವಕ್ಕಾಗಿ ಮೃಣ್ಮಯ ಕೃಷ್ಣಮೂರ್ತಿ ಸಿದ್ಧಪಡಿಸಲಾಗಿದೆ. ಚಿನ್ನದ ರಥೋತ್ಸವದ ಬಳಿಕ ಅದನ್ನು ಮಧ್ವಸರೋವರದಲ್ಲಿ ಜಲಸ್ತಂಭನ ಮಾಡಲಾಗುವುದು.
ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಸೆ.6ರಂದು ಸಂಜೆ ಐದು ಗಂಟೆಗೆ ರಾಜಾಂಗಣದಲ್ಲಿ ನಡೆಯಲಿದೆ.
.jpg)
.jpg)
.jpg)
.jpg)
.jpg)
.jpg)
.jpg)
.jpg)