ಪೇಜಾವರ ಚಾತುರ್ಮಾಸ್ಯ: ಸಂಭ್ರಮದ ಜನ್ಮಾಷ್ಟಮಿ ಉತ್ಸವ ಸಂಪನ್ನ

ಲೋಕಬಂಧು ನ್ಯೂಸ್ | ನವದೆಹಲಿ, ಸೆ.6
ಇಲ್ಲಿನ ವಸಂತ್ ಕುಂಜ್ ಪೇಜಾವರ ಶಾಖಾಮಠವಾದ ವೇದವ್ಯಾಸ ಗುರುಕುಲದ ಶ್ರೀಕೃಷ್ಣ ಧಾಮದಲ್ಲಿ ಚಾತುರ್ಮಾಸ್ಯ ವ್ರತ ನಿರತರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಹಮ್ಮಿಕೊಂಡ ಮೂರು ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ವೈಭವದ ಮೊಸರು ಕುಡಿಕೆ ಉತ್ಸವದೊಂದಿಗೆ ಸೆ.5ರಂದು ಶನಿವಾರ ಸಂಪನ್ನಗೊಂಡಿತು‌‌.
ಅಂದು ಸಂಜೆ ಶ್ರೀಪಾದರು ಕಾಲೀಯ ಮರ್ದನ ಕೃಷ್ಣದೇವರಿಗೆ ಮಂಗಳಾರತಿ ಬೆಳಗಿದ ಬಳಿಕ ವಸಂತ್ ಕುಂಜ್'ನ ಬೀದಿಯಲ್ಲಿ ಉತ್ಸವ ನೆರವೇರಿತು.
ಬಳಿಕ ನಡೆದ ಮೊಸರು ಉತ್ಸವದಲ್ಲಿ ಗುರುಕುಲದ ವಿದ್ಯಾರ್ಥಿಗಳು, ಅನೇಕ ಭಕ್ತರು ಸುರಿಯುತ್ತಿದ್ದ  ಮಳೆಯನ್ನೂ ಲೆಕ್ಕಿಸದೇ ಕುಣಿದು ಸಂಭ್ರಮಿಸಿದರು.‌
ಮೂರು ದಿನಗಳ ಕಾಲ ಜ್ಞಾನಸತ್ರ , ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗೆ ಸ್ಪರ್ಧೆಗಳು ನಡೆದವು.
ನವದೆಹಲಿ ಭಾಗದ ಜನತೆಗೆ ಅಪೂರ್ವವಾಗಿದ್ದ ಉಡುಪಿ ಶೈಲಿಯ ಕೃಷ್ಣ ಜನ್ಮಾಷ್ಟಮಿ ಉತ್ಸವ ಮುದ ನೀಡಿತು.
ಪ್ರಸಾದ ರೂಪದಲ್ಲಿ ವಿತರಿಸಲಾದ ಉಂಡೆ, ಚಕ್ಕುಲಿ ವಿಶೇಷ ಸವಿ ನೀಡಿದ್ದು, ಅವುಗಳ ಸಿದ್ಧತೆಗಾಗಿ ಉಡುಪಿಯಿಂದಲೇ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲಾಗಿತ್ತು.