ಲೋಕಬಂಧು ನ್ಯೂಸ್ | ಉಡುಪಿ, ಸೆ.25
ಕಾನೂನುಗಳು ಇದ್ದರಷ್ಟೇ ಸಾಲದು; ಸಮಾಜದ ಮನಃಸ್ಥಿತಿಯೂ ಬದಲಾಗಬೇಕು. ಕಾನೂನಿನ ಅರಿವಿನ ಜೊತೆಗೆ ದೌರ್ಜನ್ಯಕ್ಕೆ ಒಳಗಾದವರು ತಮ್ಮ ಹಕ್ಕುಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ವಕೀಲೆ ಸುಚಿತ್ರ ಹೇಳಿದರು.
ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಗುರುವಾರ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ಮಾದಕ ವ್ಯಸನ ವಿರೋಧಿ ಸಮಿತಿ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ನಡೆದ ಮಾದಕ ವ್ಯಸನ ಮುಕ್ತ ಸಮಾಜ, ದೌರ್ಜನ್ಯ ತಡೆ ಹಾಗೂ ಅಸ್ಪೃಶ್ಯತೆ ನಿವಾರಣೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ನಿಂದನೆ ಸೇರಿದಂತೆ ವಿವಿಧ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಒದಗಿಸುವ ರಕ್ಷಣೆ ಹಾಗೂ ನ್ಯಾಯ ಪಡೆಯುವ ಪ್ರಕ್ರಿಯೆ ಕುರಿತು ವಿವರಿಸಿದರು.
ಉಡುಪಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಭರತೇಶ್, ದೇಶದ ಅಭಿವೃದ್ಧಿಗೆ ನಾವು ನೀಡಬಹುದಾದ ಮಹತ್ವದ ಕೊಡುಗೆ ಎಂದರೆ ಮಾದಕ ದ್ರವ್ಯಗಳಿಂದ ದೂರವಿರುವುದು. ಮಾದಕ ವ್ಯಸನ ವ್ಯಕ್ತಿಯ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಕುಟುಂಬ ಹಾಗೂ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
ಯುವಜನರು ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಚಟುವಟಿಕೆಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಇಲಾಖೆಯ ಮನಃಶಾಸ್ತ್ರ ತಜ್ಞೆ ಕ್ಯಾಥರಿನ್ ಮಾತನಾಡಿ ಹೊಸ ಅನುಭವಗಳನ್ನು ಪಡೆಯುವ ಕುತೂಹಲ, ಅಪಾಯವನ್ನು ಸ್ವೀಕರಿಸುವ ಪ್ರವೃತ್ತಿ ಹಾಗೂ ಗೆಳೆಯರ ಒತ್ತಡ ಯುವಜನರು ಮಾದಕ ವಸ್ತುಗಳನ್ನು ಉಪಯೋಗಿಸಲು ಕಾರಣವಾಗಬಹುದು. ಯುವಜನರು ಆರೋಗ್ಯಕರ ಜೀವನಶೈಲಿ ಹಾಗೂ ಸಕಾರಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ.ನಿಕೇತನ, ಯುವಜನರು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯ ಮತ್ತು ಶಕ್ತಿಯನ್ನು ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸೃಜನಶೀಲ ಚಟುವಟಿಕೆಗಳತ್ತ ಬಳಸಿಕೊಳ್ಳಬೇಕು ಎಂದರು.
ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಭಟ್ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ವಿನಾಯಕ್ ವಂದಿಸಿದರು. ವಿದ್ಯಾರ್ಥಿನಿ ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ರಮೇಶ್, ವಿಜಯಲಕ್ಷ್ಮಿ, ಉಮಾಕಾಂತಿ, ಮಾದಕ ವ್ಯಸನ ವಿರೋಧಿ ಸಮಿತಿ ಸಂಚಾಲಕ ಡಾ.ರವೀಶ ಬಿ., ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ರಾಕೇಶ್ ಹಾಗೂ ಡಾ.ಸಫಿಯಾ ಇದ್ದರು.
ಇದೇ ಸಂದರ್ಭದಲ್ಲಿ ಎನ್ಎಸ್ಎಸ್ ದಿನಾಚರಣೆಯನ್ನೂ ಮಾಡಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದ ಎನ್ಎಸ್ಎಸ್ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಮಾದಕ ವ್ಯಸನಮುಕ್ತ ಸಮಾಜದ ಸಂದೇಶ ಸಾರುವ ಉದ್ದೇಶದಿಂದ ವಿದ್ಯಾರ್ಥಿನಿಯರು ಕಾಲೇಜಿನಿಂದ ಭುಜಂಗ ಪಾರ್ಕ್ ವರೆಗೆ ಜಾಥಾ ನಡೆಸಿದರು.
.jpg)
.jpg)