ಲೋಕಬಂಧು ನ್ಯೂಸ್ | ನವದೆಹಲಿ, ಸೆ.22
2031ರಲ್ಲಿ ನಡೆಸಲುದ್ದೇಶಿಸಿರುವ ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಾಬ್ದ ಪಂಚವಾರ್ಷಿಕ ಯೋಜನೆ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
ಇಲ್ಲಿನ ವಸಂತ್ ಕುಂಜ್ ಪೇಜಾವರ ಶಾಖಾಮಠ ವೇದವ್ಯಾಸ ಗುರುಕುಲದ ಶ್ರೀ ಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತನಿಷ್ಠರಾಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಶ್ರೀಪಾದರನ್ನು ಆದರದಿಂದ ಬರಮಾಡಿಕೊಂಡ ಮೋದಿ ಅವರು ಉಭಯ ಕುಶಲೋಪರಿ ನಡೆಸಿದರು.
ಶ್ರೀಗಳು ಪ್ರಧಾನಿ ಮೋದಿ ಅವರಿಗೆ ಯಕ್ಷಗಾನದ ರಾಜಕಿರೀಟ ತೊಡಿಸಿ ಶಾಲು , ಸ್ವರ್ಣ ಲೇಪಿತ ಕಾಲೀಯಮರ್ದನ ಕೃಷ್ಣನ ಪ್ರತಿಮೆ ಸಹಿತ ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕಳೆದ ವಾರ ಮೋದಿ ಜನ್ಮದಿನದಂದು ಅವರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಅವರ ಹೆಸರು, ಗೋತ್ರ, ನಕ್ಷತ್ರ ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ವೇದವ್ಯಾಸ ಗುರುಕುಲದಲ್ಲಿ ನಡೆಸಲಾಗಿದ್ದ ಪೂರ್ಣ ನವಗ್ರಹ ಹೋಮ ಹಾಗೂ ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನೂ ನೀಡಿ ಶ್ರೀಪಾದರು ಶುಭ ಕೋರಿದರು.
ಇಂದ್ರಪ್ರಸ್ಥ (ದೆಹಲಿ)ದಲ್ಲಿ ನಡೆಸಿದ ಚಾತುರ್ಮಾಸ್ಯ ವ್ರತ ಅತ್ಯಂತ ಸಂತೋಷ ತಂದಿದೆ. ದೆಹಲಿಯಲ್ಲಿ ಕುಳಿತು ದೇಶ, ಧರ್ಮದ ಒಳಿತಿಗಾಗಿ ಕೆಲವು ಹೋಮ ಹವನಗಳು, ಸತ್ಸಂಗ, ಜಪಯಜ್ಞ ಇತ್ಯಾದಿ ಧಾರ್ಮಿಕ ವಿಧಿಗಳ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಿದ್ದು ತುಂಬಾ ಸಂತೋಷ ತಂದಿದೆ.
ಇದೀಗ ಪ್ರಧಾನಿಯವರಿಂದ ಗುರುಗಳ ಜನ್ಮಶತಾಬ್ದ ಪಂಚವಾರ್ಷಿಕ ಯೋಜನೆಗಳ ಲಾಂಛನ ಅನಾವರಣಗೊಂಡಿರುವುದು ಅರ್ಥಪೂರ್ಣವಾಗಿದೆ. ದೇಶ, ಧರ್ಮದ ಒಳಿತಿಗೆ ನಿಶಿ-ಹಗಲೆನ್ನದೇ ದುಡಿಯುತ್ತಿರುವ ಪ್ರಧಾನಿ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಅತ್ಯಂತ ಉತ್ತಮ ರೀತಿಯಲ್ಲಿ ದೇಶವನ್ನು ಮುನ್ನಡೆಸುತ್ತಾ ದೇಶ ಮತ್ತು ಭಾರತೀಯರ ಗೌರವವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಇನ್ನೂ ಬಹುಕಾಲ ಅವರು ಯಶಸ್ವಿಯಾಗಿ ಭಾರತವನ್ನು ಮುನ್ನಡೆಸುವಂತಾಗಲಿ ಎಂದು ಶ್ರೀಗಳು ಹಾರೈಸಿದರು.
ಪ್ರಧಾನಿ ಮೋದಿ ಮಾತನಾಡಿ, ಶ್ರೀ ವಿಶ್ವೇಶತೀರ್ಥರು ಮತ್ತು ಪೇಜಾವರ ಮಠ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಸದಾ ಪ್ರೇರಣದಾಯಿಯಾಗಿದ್ದು, ಬಿಜೆಪಿಗೂ ಉಡುಪಿ ನೀಡಿದ ಕೊಡುಗೆ ಸದಾ ಸ್ಮರಣೀಯ. ಗುರುಗಳ ಜನ್ಮ ಶತಾಬ್ದ ಯೋಜನೆಗಳು ಯಶಸ್ವಿಯಾಗಿ ಸಮಾಜ, ದೇಶಕ್ಕೆ ಮತ್ತಷ್ಟು ಬಲ ನೀಡುವಂತಾಗಲಿ.
ಉಡುಪಿಗೂ ದ್ವಾರಕೆಗೂ ಗಾಢ ಸಂಬಂಧ ಇದೆ. ಆದ್ದರಿಂದ ಜನ್ಮಶತಾಬ್ದ ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸಿಕೊಂಡು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್, ಉದ್ಯಮಿಗಳಾದ ಪಿ.ರಾಮಪ್ರಸಾದ್, ಡಾಕೆ.ಪ್ರಕಾಶ್ ಶೆಟ್ಟಿ ಮತ್ತು ರವಿ ಶ್ಯಾಮ್ , ನವದೆಹಲಿ ಕೇಂದ್ರೀಯ ವಿ.ವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಬೆಂಗಳೂರಿನ ಕೈಗಾರಿಕೋದ್ಯಮಿ ಹರೀಶ್ ರಾಯಸ್ , ಮೈಸೂರಿನ ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಚ್. ವಾಸುದೇವ ಭಟ್, ಬದರಿ ನಾರಾಯಣ ಲಡ್ಡಾ, ಶ್ರೀನಿವಾಸ ಪ್ರಸಾದ್ ಮೈಸೂರು, ಟಿ.ಪಿ.ಅನಂತ್ ಬೆಂಗಳೂರು, ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ.ವಿಠೋಬಾಚಾರ್ಯ, ಸ್ವಾಮೀಜಿಯವರ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಮಠದ ಪಿ.ಆರ್.ಒ ವಾಸುದೇವ ಭಟ್ ಪೆರಂಪಳ್ಳಿ ಸಂಯೋಜಿಸಿದರು.
ಲಾಂಛನವನ್ನು ಶ್ರೀಪಾದರ ಮಾರ್ಗದರ್ಶನದಲ್ಲಿ ವಾಸುದೇವ ಭಟ್ ವಿನ್ಯಾಸಗೊಳಿಸಿ ಉಡುಪಿಯ ನಿಧಿ ಗ್ರಾಫಿಟೆಕ್'ನ ಮುರಲಿಕೃಷ್ಣ ರಾವ್ ಕೃತಿಗಿಳಿಸಿದ್ದಾರೆ.
.jpg)
.jpg)
.jpg)