ಕಟೀಲು ಮೇಳದ ಕಲಾವಿದರ ಯಕ್ಷಕುಶಲೋಪರಿ

ಲೋಕಬಂಧು ನ್ಯೂಸ್ | ಉಡುಪಿ, ಸೆ.20
ಕಟೀಲು ಮೇಳಗಳಲ್ಲಿ ಕಲಾವಿದರಾಗಿದ್ದು, ನಿವೃತ್ತರಾಗಿರುವ 70 ವರ್ಷ ಮೀರಿದ ಕಲಾವಿದರ ಮನೆಗೆ ಭೇಟಿ ನೀಡುವ ಕಟೀಲು ಮೇಳಗಳ ಅಭಿಮಾನಿಗಳ ಯಕ್ಷಕುಶಲೋಪರಿಯ ಎರಡನೇ ಹಂತದ ಸುಹೃತ್ ಯಾನ ಶನಿವಾರ ಉಡುಪಿ ಜಿಲ್ಲೆಯ ಕಲಾವಿದರ ಮನೆಗಳಿಗೆ ಸಾಗಿತು.
ಸಂಜೀವ ಬಳೆಗಾರ ಶಂಕರನಾರಾಯಣ, ಬಾಬು ಕುಲಾಲ್ ಗಾವಳಿ, ಪುಂಡರೀಕಾಕ್ಷ ಉಪಾಧ್ಯಾಯ ಉಡುಪಿ ಮತ್ತು ಕೋಳ್ಯೂರು ರಾಮಚಂದ್ರ ರಾವ್ ಇನ್ನಂಜೆ ಅವರ ಮನೆಗಳಿಗೆ ಭೇಟಿ ನೀಡಿದ ಅಭಿಮಾನಿಗಳ ಬಳಗ ಕಟೀಲು ದೇವರ ಪ್ರಸಾದ, ದಿನಸಿ ಸಾಮಗ್ರಿ, ಕಿರುಕಾಣಿಕೆಯೊಂದಿಗೆ ಗೌರವಿಸಿತು. ಕಲಾವಿದರೊಂದಿಗೆ ಗತವೈಭವದ ಮೆಲುಕು ಹಾಕುತ್ತ, ಅನುಭವಗಳನ್ನು ಕೇಳಿದರು.


ಪುಂಡರೀಕಾಕ್ಷ ಉಪಾಧ್ಯಾಯ
84ರ ಹರೆಯದ ಪುಂಡರೀಕಾಕ್ಷ ಉಪಾಧ್ಯಾಯ ಅವರು ಸಾಲಿಗ್ರಾಮ, ಇಡಗುಂಜಿ ಮೇಳಗಳಲ್ಲಿ ತಿರುಗಾಟ ನಡೆಸಿ, ಮುಂದೆ ಕರ್ನಾಟಕ ಮೇಳದಲ್ಲಿ ದಾಮೋದರ ಮಂಡೆಚ್ಚ ಅವರ ನಿರ್ದೇಶನದಲ್ಲಿ 17 ವರ್ಷ ತಿರುಗಾಟ ನಡೆಸಿದವರು. ಆ ಬಳಿಕ 27 ವರ್ಷ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದ ಖ್ಯಾತ ಸ್ತ್ರೀವೇಷಧಾರಿ. ದೇವಿ ಪಾತ್ರಕ್ಕೆ ಹೊಸ ಆಯಾಮ ನೀಡಿದವರು.
ಸಂಜೀವ ಬಳೆಗಾರ
ಕಟೀಲು ಮೇಳಗಳಲ್ಲೇ ನಾಲ್ಕು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿದ ಖ್ಯಾತ ಸ್ತ್ರೀ ವೇಷಧಾರಿ. ಸಾಲಿಗ್ರಾಮ, ಇಡಗುಂಜಿ ಮೇಳಗಳದ್ದೂ ಸೇರಿಸಿದರೆ 60 ವರ್ಷಗಳ ಯಕ್ಷಗಾನ ತಿರುಗಾಟ. ಕಟೀಲು ಕ್ಷೇತ್ರ ಮಹಾತ್ಮ್ಯೆಯ ಯಶೋಮತಿ ಪಾತ್ರಕ್ಕೆ ಹೊಸ ಆಯಾಮ ಕೊಟ್ಟು ಯಶೋಮತಿ ಸಂಜೀವ ಎಂದೇ ಖ್ಯಾತರಾದವರು. ಅವರಿಗೆ ಈಗ 80ರ ಹರೆಯ.
ಬಾಬು ಕುಲಾಲ್
ಬಾಬು ಕುಲಾಲ್ ಯಾನೆ ಬಸವ ಕುಲಾಲ್ ಅವರು ಮಂದರ್ತಿ, ಮಾರಣಕಟ್ಟೆ, ಕಮಲಶಿಲೆ, ಸಾಲಿಗ್ರಾಮ ಮೊದಲಾದ ಮೇಳಗಳಲ್ಲಿ ಸುಮಾರು 20 ವರ್ಷ ತಿರುಗಾಟ ನಡೆಸಿ, ಕಟೀಲು ಎರಡನೇ ಮೇಳದಲ್ಲೇ 34 ವರ್ಷ ತಿರುಗಾಟ ನಡೆಸಿದ ಖ್ಯಾತ ಸ್ತ್ರೀವೇಷಧಾರಿ. ಭಾಗವತ ನಾರಾಯಣ ಉಪ್ಪೂರರ ಮಾರ್ಗದರ್ಶನದಲ್ಲಿ ಬಡಗಿನಲ್ಲಿ, ಬಳಿಕ ಕಟೀಲು ಮೇಳದಲ್ಲಿ ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ತಿರುಗಾಟ. ವೈವಿಧ್ಯಮಯ ಸ್ತ್ರೀಪಾತ್ರಗಳನ್ನು ನಿರ್ವಹಿಸಿದವರು. ಅವರಿಗೆ ಈಗ 74 ವರ್ಷ.
ಕೋಳ್ಯೂರು ರಾಮಚಂದ್ರ ರಾವ್
ಕುಂಡಾವು, ಸುರತ್ಕಲ್, ಧರ್ಮಸ್ಥಳ, ಕರ್ನಾಟಕ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿ ಕಟೀಲು ಮೇಳದಲ್ಲಿ ದೀರ್ಘಕಾಲ ಒಟ್ಟಾರೆ 65 ವರ್ಷ ತಿರುಗಾಟ ನಡೆಸಿದ ಖ್ಯಾತ ಸ್ತ್ರೀವೇಷಧಾರಿ. ತುಳು, ಕನ್ನಡ, ಸಾಮಾಜಿಕ ಹಾಗೂ ಪೌರಾಣಿಕ ಪ್ರಸಂಗಗಳಲ್ಲಿ ಮೆರೆದವರು. ಅವರಿಗೆ ಈಗ 94ರ ಹರೆಯ.


ದೇಗುಲ ಹಾಗೂ ಮೇಳದ ಪ್ರೋತ್ಸಾಹ
ಈ ಸಂದರ್ಭದಲ್ಲಿ ಮಾತನಾಡಿದ ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ, ವೃದ್ಧಾಪ್ಯದಲ್ಲಿರುವ ಕಲಾವಿದರ ಮನೆಗೆ ಭೇಟಿ ನೀಡಿ ಅವರೊಂದಿಗೆ ಒಂದಿಷ್ಟು ಹೊತ್ತು ಸಮಯ ಕಳೆದು ಅವರ ಅನುಭವ ಪಡೆದುಕೊಳ್ಳುವ ಜೊತೆಗೆ ಹಿರಿಯರ ಮನಸ್ಸನ್ನು ಒಂದಷ್ಟು ಖುಷಿಪಡಿಸುವ ಕಟೀಲು ಮೇಳಗಳ ಅಭಿಮಾನಿಗಳ ಸುಹೃತ್ ಯಾನಕ್ಕೆ ಕಟೀಲು ದೇಗುಲ ಹಾಗೂ ಮೇಳದ ಕಡೆಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ.


ಯಕ್ಷಗಾನ ಕಲಾವಿದರು ಮಾತ್ರವಲ್ಲದೆ ಶಿಕ್ಷಕರು, ವಿವಿಧ ಕ್ಷೇತ್ರಗಳ ಹಿರಿಯ ಸಾಧಕರನ್ನು ಮಾತನಾಡಿಸುವ ಇಂಥ ಅಭಿಮಾನ ಎಲ್ಲಾ ಕಡೆಯೂ ಆಗಬೇಕು ಎಂದರು.


ಅರ್ಥಪೂರ್ಣ ಕಾರ್ಯಕ್ರಮ
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಅನೇಕ ಕಲಾವಿದರ ಮನೆಗಳಿಗೆ ಭೇಟಿ ನೀಡುವ ಕೆಲಸ ಮಾಡುತ್ತ ಬಂದಿದ್ದು ಇದೀಗ ಕಟೀಲು ಮೇಳಗಳ ಅಭಿಮಾನಿಗಳು ನಡೆಸುತ್ತಿರುವ ಯಕ್ಷಕುಶಲೋಪರಿ ಅರ್ಥಪೂರ್ಣ ಕಾರ್ಯಕ್ರಮ. ಒಂದು ಕಾಲಕ್ಕೆ ರಂಗಸ್ಥಳದಲ್ಲಿ ಮೆರೆದು ಈಗ ಇಳಿಹರೆಯದಲ್ಲಿರುವ ಕಲಾವಿದರು ಇಂಥ ಭೇಟಿಯಿಂದ ಹೊಸಚೈತನ್ಯ ಪಡೆಯುತ್ತಾರೆ ಎಂದರು.


ಈ ಸಂದರ್ಭದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಜೊತೆ ಕಾರ್ಯದರ್ಶಿ ನಾರಾಯಣ ಹೆಗಡೆ ಮತ್ತು ಸದಸ್ಯ ಪೃಥ್ವಿರಾಜ್ ಕವತ್ತಾರ್, ದೇವು ಹನೆಹಳ್ಳಿ, ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಪಶುಪತಿ ಶಾಸ್ತ್ರಿ, ಅವಿನಾಶ ಬೈಪಡಿತ್ತಾಯ, ಸುನಿಲ್ ಬಂಗೇರ, ದುರ್ಗಾಪ್ರಸಾದ ದಿವಾಣ, ರಂಜನ್ ಹೊಳ್ಳ, ದಿನೇಶ್, ಜಯಂತ್, ಅಶೋಕ್, ಪ್ರಶಾಂತ್, ಪುರುಷೋತ್ತಮ ಕೋಟ್ಯಾನ್, ರಘುರಾಮ ರಾವ್, ಚಂದ್ರಕಾಂತ್ ಮೊದಲಾದವರಿದ್ದರು.