ತುಳುವಪ್ಪೆ: ತುಳುಮಾತೆಯ ಮೊದಲ ಕಲಾಕೃತಿ

ಲೋಕಬಂಧು ನ್ಯೂಸ್ | ಮಣಿಪಾಲ, ಸೆ.20
ತುಳುವಿಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಮನ್ನಣೆ ಲಭಿಸಿದ ಹಿನ್ನೆಲೆಯಲ್ಲಿ ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಭಾವೈಕ್ಯತೆಯನ್ನು ಪ್ರತಿನಿಧಿಸುವ ತುಳುವಪ್ಪೆಯ ಅಕ್ರಾಲಿಕ್ ಕಲಾಕೃತಿಯನ್ನು ಭಾನುವಾರ ಕೊಡವೂರು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅನಾವರಣಗೊಳಿಸಲಾಗಿದ್ದು, ತುಳುವಿಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಮಾನ್ಯತೆ ಲಭಿಸಿರುವ ಈ ಸಂದರ್ಭ ಸಮಸ್ತ ತುಳುಭಾಷಿಗರಿಗೆ ಸಂತಸ ತರುವ ಸಂಗತಿ‌ ಎಂದು ಕಲಾವಿದ ಪಿ.ಎನ್.ಆಚಾರ್ಯ ಮಣಿಪಾಲ ತಿಳಿಸಿದ್ದಾರೆ.
ತುಳು ವಿದ್ವಾಂಸ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಸಲಹೆ ಸೂಚನೆ ಮೇರೆಗೆ ಕಲಾವಿದ ಪಿ.ಎನ್.ಆಚಾರ್ಯ ಅವರು 2021ರಲ್ಲಿ ತನ್ನ ಪರಿಕಲ್ಪನೆಯಲ್ಲಿ ಈ‌ ಕಲಾಕೃತಿ ರಚಿಸಿದ್ದು, ಅದು ತುಳುಮಾತೆಯ ಮೊದಲ ಚಿತ್ರ ಎಂಬ ಖ್ಯಾತಿ ಪಡೆದಿದೆ.
ಕಲಾಕೃತಿಯನ್ನು ಕೊಡಂಕೂರು ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಘುನಾಥ್ ಮಾಬಿಯಾನ್ ನೇತೃತ್ವದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ ಧರ್ಮದರ್ಶಿ ದಿವಾಕರ ಶೆಟ್ಟಿ ಕೊಡವೂರು ಹಾಗೂ ನಾಗರಿಕರ ಹಿತರಕ್ಷಣಾ ವೇದಿಕೆ ಕೊಡಂಕೂರು ಸಂಯುಕ್ತಾಶ್ರಯದಲ್ಲಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಅಲೆವೂರು ಯೋಗೀಶ್ ಆಚಾರ್ಯ ಅನಾವರಣಗೊಳಿಸಿದ್ದರು.


ಸಂಚಾಲಕ ಮಹಾಬಲ ಕುಂದರ್, ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಅಶೋಕ ಪೂಜಾರಿ, ಜಯಂತಿ, ಆಶಾ, ಚೇತನ್ ನಾವೇಕರ್, ರಮೇಶ್ ಸಿ. ಬಂಗೇರ, ಜಗನ್ನಾಥ ಪೂಜಾರಿ ಮೊದಲಾದವರಿದ್ದರು ಎಂದು ಪಿ.ಎನ್. ಆಚಾರ್ಯ ಸ್ಮರಿಸಿದ್ದಾರೆ.