ಮಾಜಿ ಸಚಿವ ರಮಾನಾಥ ರೈ ಕಾರಿಗೆ ಖಾಸಗಿ ಬಸ್ ಢಿಕ್ಕಿ: ಪ್ರಾಣಾಪಾಯದಿಂದ ಪಾರು, ಆಸ್ಪತ್ರೆಗೆ ದಾಖಲು

ಲೋಕಬಂಧು ನ್ಯೂಸ್ | ಕಾರ್ಕಳ, ಸೆ.20
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು‌ ಮತ್ತು ಖಾಸಗಿ ಬಸ್ ನಡುವೆ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರಿನ ಚಿಲಿಂಬಿ ಸಮೀಪ ಭಾನುವಾರ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ರೈ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ರಮಾನಾಥ ರೈ ಅವರ ಸಹಾಯಕ ತೀವ್ರ ಗಾಯಗೊಂಡಿದ್ದಾರೆ.
ರಮಾನಾಥ ರೈ ಅವರು ಮೂಡುಬಿದಿರೆಯಿಂದ ಕಾರ್ಕಳದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ವಿಶಾಲ್ ಎಂಬ ಹೆಸರಿನ ಖಾಸಗಿ ಬಸ್ ಮುಖಾಮುಖಿ ಢಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ರಮಾನಾಥ ರೈ ಅವರ ಕೈ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಪ್ತ ಸಹಾಯಕ ಡೆನ್ಸಿಲ್ ಎಂಬಾತನ ಕಾಲು ಜಖಂಗೊಂಡಿದೆ. ಚಾಲಕನಿಗೂ ಗಾಯಗಳಾಗಿವೆ. ರೈ ಸಹಿತ ಮೂವರು ಕಾರಿನಲ್ಲಿದ್ದರು.
ಸ್ಥಳೀಯರ ಸಮಯಪ್ರಜ್ಞೆ- ತಕ್ಷಣ ರಕ್ಷಣೆ
ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕಾಗಮಿಸಿದ ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್, ಶಿಶಿರ್ ಹಾಗೂ ಸ್ಥಳೀಯರು ಹರ ಸಾಹಸಪಟ್ಟು ಕಾರಿನೊಳಗೆ ಸಿಲುಕಿಕೊಂಡಿದ್ದ ಮಾಜಿ ಸಚಿವ ರಮಾನಾಥ್ ರೈ ಮತ್ತು ಅವರ ಚಾಲಕ ಮತ್ತು ಆಪ್ತ ಸಹಾಯಕನನ್ನು ಹೊರತೆಗೆದರು. ಬಳಿಕ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾರ್ಕಳದ ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಗೆ ಸಾಗಿಸಲಾಯಿತು.


ರಮಾನಾಥ ರೈ ಹಾಗೂ ಚಾಲಕ ಮತ್ತು ಆಪ್ತ ಸಹಾಯಕ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ‌ ಮಂಗಳೂರಿನ ಯೇನಪೋಯ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಎಎಸ್.ಪಿ. ಇಷ್ತಿಕಾ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.