ಲೋಕಬಂಧು ನ್ಯೂಸ್, ಉಡುಪಿ
ರಾಜ್ಯದ ಪ್ರಾಚೀನ ಮಠಗಳಲ್ಲೊಂದಾದ ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠಕ್ಕೆ ತರಾತುರಿಯಲ್ಲಿ ಉತ್ತರಾಧಿಕಾರಿಯನ್ನು ನೇಮಿಸಲು ಮಠಕ್ಕೆ ಸಂಬಂಧಪಡದ ಕೆಲವರು ಪ್ರಯತ್ನಿಸುತ್ತಿದ್ದು ಅದನ್ನು ಖಂಡಿಸುತ್ತೇವೆ ಮತ್ತು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಪ್ರಯತ್ನವನ್ನು ತಡೆಯಬೇಕು ಎಂದು ಬಾಳೆಕುದ್ರು ಮಠ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಗೌಪ್ಯ ಸಭೆ
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಸಾಲಿಗ್ರಾಮ ಶಿವರಾಮ ಉಡುಪ, ಶ್ರೀಮಠದ ಪೀಠಾಧಿಪತಿ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅದನ್ನೇ ನೆಪವಾಗಿಟ್ಟುಕೊಂಡು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದ್ದು, ಈ ಸಂಬಂಧ ನ. 16ರಂದು ಬೆಂಗಳೂರಿನಲ್ಲಿ ಗೌಪ್ಯ ಸಭೆ ನಡೆಸಿ, ಮಠಕ್ಕೆ ಸಂಬಂಧಪಡದ ಮತ್ತು ಪೀಠಾಧಿಪತಿಯಾಗಲು ಯಾವ ಅರ್ಹತೆಯನ್ನೂ ಹೊಂದಿಲ್ಲದ ವ್ಯಕ್ತಿಯೊಬ್ಬರನ್ನು ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ. ಅದನ್ನು ಬಾಳೆಕುದ್ರು ಶ್ರೀಮಠ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕೋರ್ಟ್ ತಡೆಯಾಜ್ಞೆ
ಸಮಿತಿ ಈಗಾಗಲೇ ಶ್ರೀಮಠದ ಉತ್ತರಾಧಿಕಾರಿ ನೇಮಕಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. ಹಾಗಿದ್ದರೂ ಅದನ್ನು ಧಿಕ್ಕರಿಸಿರುವ ಕೆಲವರು ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮತ್ತು ಬೆಂಗಳೂರಿನ ಕೈಲಾಸಾಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಸ್ವಾಮೀಜಿಯವರಿಗೆ ತಪ್ಪು ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿ ಉತ್ತರಾಧಿಕಾರಿಯನ್ನು ನೇಮಿಸಿರುವುದು ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ.
ಶೃಂಗೇರಿ ಮಠದ ಮಾರ್ಗದರ್ಶನದ ಸಂಪ್ರದಾಯ
ಬಾಲೆಕುದ್ರು ಶ್ರೀಮಠದಲ್ಲಿ ಅನಾದಿಕಾಲದಿಂದಲೂ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಜಗದ್ಗುರುಗಳ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಪೀಠಾಧಿಪತಿಗಳನ್ನು ನಿಯುಕ್ತಿ ಮಾಡುವುದು ಸಂಪ್ರದಾಯ. ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರನ್ನೂ ಶೃಂಗೇರಿ ಶ್ರೀಮಠದ ಗುರುವರ್ಯರ ಮಾರ್ಗದರ್ಶನದಲ್ಲಿಯೇ ನಿಯುಕ್ತಿಗೊಳಿಸಿ, ಪಟ್ಟಾಭಿಷೇಕ ಮಾಡಲಾಗಿತ್ತು.
ಪ್ರಸ್ತುತ ಈ ನೇಮಕಕ್ಕೆ ಶೃಂಗೇರಿ ಶ್ರೀಮಠದ ಒಪ್ಪಿಗೆ ಪಡೆಯಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಮಠದ ಭಕ್ತರು ಹಾಗೂ ಶಿಷ್ಯ ವರ್ಗದವರ ದಿಕ್ಕು ತಪ್ಪಿಸಲಾಗುತ್ತಿದೆ. ಬಾಳೆಕುದ್ರು ಮಠದ ಉತ್ತರಾಧಿಕಾರಿ ನೇಮಕಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇರುವುದನ್ನು ಸಮಿತಿ, ಹಿಂದೆಯೇ ಶೃಂಗೇರಿ ಮಠದ ಗಮನಕ್ಕೆ ತಂದಿದ್ದು, ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳು ಈ ಬಗ್ಗೆ ತಮ್ಮಲ್ಲಿ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ತಿಳಿಸಿದ್ದು, ಮಠದ ಆಡಳಿತಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಈ ನೇಮಕ ಶೃಂಗೇರಿ ಶ್ರೀಮಠದ ಗಮನಕ್ಕೂ ಬಂದಿಲ್ಲ ಎಂದು ಉಡುಪ ತಿಳಿಸಿದರು.
ಸಂಪ್ರದಾಯ ಭಂಗ
ಅದ್ವೈತ ಭಾಗವತ ಸಂಪ್ರದಾಯ ಅನುಸರಿಸುತ್ತಿರುವ ಶಿವಳ್ಳಿ ಸ್ಮಾರ್ತ ಬ್ರಾಹ್ಮಣರ ಗುರುಮಠವಾಗಿರುವ ಬಾಳೆಕುದ್ರು ಶ್ರೀಮಠ, ಕರಾವಳಿ ಜಿಲ್ಲೆಗಳು ಮತ್ತು ಘಟ್ಟದ ಮೇಲೆ ಅಪಾರ ಶಿಷ್ಯ ಸಮುದಾಯ ಹೊಂದಿ, ಶ್ರೇಷ್ಠ ಪರಂಪರೆ ಹೊಂದಿರುವ ಮಠ ಎಂದು ಹೆಸರು ಮಾಡಿದೆ.
ಆದರೆ, ಕಳೆದ ಎರಡು ದಶಕಗಳಿಂದ ಶ್ರೀಮಠದಲ್ಲಿ ಹಣಕಾಸಿನ ಅವ್ಯವಹಾರ, ಸಂಪ್ರದಾಯ ಭಂಗ ಆಗಿರುವ ಕುರಿತು ಆರೋಪಗಳಿವೆ. ಚಿಕ್ಕಮಗಳೂರಿನ ಕೆ.ಎಸ್. ನಿತ್ಯಾನಂದ ಎಂಬ ಸ್ವಯಂಘೋಷಿತ ಮೀಮಾಂಸಕನ ಪಾಳೆಗಾರಿಕೆಯಿಂದ ಅಲ್ಲಿ ಅನೇಕ ನಡೆಯಬಾರದ ಕೆಲಸ ಕಾಮಗಾರಿಗಳು ನಡೆದಿರುವುದು ಶಿಷ್ಯ ಸಮುದಾಯ ಹಾಗೂ ಭಕ್ತರಿಗೆ ನೋವು ತಂದಿತ್ತು. ಹಾಗಾಗಿ ಶ್ರೀಮಠದ ಶಿಷ್ಯರು ಹಿತರಕ್ಷಣಾ ಸಮಿತಿ ರಚಿಸಿಕೊಂಡು ಶ್ರೀಮಠದ ಘನತೆ, ಶ್ರೇಷ್ಠತೆ ಕಾಪಾಡಲು ಹೋರಾಟ ನಡೆಸುತ್ತಿದ್ದೇವೆ.
ಬೆಂಗಳೂರಿನಲ್ಲಿ ಆಯ್ಕೆ ಯಾಕೆ?
ಬಾಳೆಕುದ್ರುನಲ್ಲಿ ವ್ಯವಸ್ಥಿತ ಶ್ರೀಮಠ ಇದ್ದರೂ, ಬೆಂಗಳೂರಿನಲ್ಲಿ ತರಾತುರಿಯಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ, ಘೋಷಿಸುವ ಸಭೆ ನಡೆಸಿ ಹಾಗೂ ಶಿಷ್ಯ ಸ್ವೀಕಾರ ಸಮಾರಂಭ ನಡೆಸಲುದ್ದೇಶಿಸಲಾಗಿದೆ. ಅದರ ಹಿಂದೆ ಕೆಲವರ ಕುತಂತ್ರವಿರುವುದು ಸ್ಪಷ್ಟವಾಗಿದೆ.ಪೂರ್ವಪರಂಪರೆ, ಸಂಪ್ರದಾಯ ಶಿಷ್ಟಾಚಾರ ಮುರಿದು ತರಾತುರಿಯಲ್ಲಿ ಶೃಂಗೇರಿ ಜಗದ್ಗುರುಗಳ ಅನುಗ್ರಹ ಪಡೆಯದೆ, ಉತ್ತರಾಧಿಕಾರಿಯನ್ನು ಘೋಷಿಸಿರುವುದು ಸತ್ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ಅದನ್ನು ಶ್ರೀಮಠದ ಶಿಷ್ಯರೆಲ್ಲರೂ ಒಪ್ಪುವುದಿಲ್ಲ ಎಂದು ಶಿವರಾಮ ಉಡುಪ ತಿಳಿಸಿದರು.
ಕಳಕಳಿಯ ಮನವಿ
ಹರಿಹರಪುರ ಶ್ರೀಮಠ ಬಾಳೆಕುದ್ರು ಶ್ರೀಮಠದ ಮೇಲೆ ಹಿಡಿತ ಸಾಧಿಸಲು ಮತ್ತು ಅದನ್ನು ತಮ್ಮ ಮಠದ ಪರಂಪರೆಗೆ ಸೇರಿಸಿಕೊಳ್ಳಲು ಉದ್ದೇಶಿಸಿದ್ದು, ಅವರು ಕೂಡಾ ಅನವಶ್ಯಕವಾಗಿ ಈ ವಿವಾದ ಹಾಗೂ ಗೊಂದಲಕ್ಕೆ ಕಾರಣರಾಗಿದ್ದಾರೆ ಎಂಬುದು ಸಮಿತಿಗೆ ಸ್ಪಷ್ಟವಾಗಿದೆ. ಈ ವಿವಾದದಿಂದ ಮತ್ತು ಕೆಲವರು ದುರುದ್ದೇಶದಿಂದ ನಡೆಸುತ್ತಿರುವ ಚಟುವಟಿಕೆಗಳಿಂದ ದೂರ ಇರುವಂತೆ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳಲ್ಲಿ ಅತ್ಯಂತ ಭಕ್ತಿ ಶ್ರದ್ಧೆಯಿಂದ ಕೇಳಿಕೊಳ್ಳುತ್ತೇವೆ ಎಂದು ಉಡುಪ ತಿಳಿಸಿದರು.
ಆಸ್ತಿ ಮೇಲೆ ಕಣ್ಣು
ಬಾಳೆಕುದ್ರು ಶ್ರೀಮಠ ಐರೋಡಿ, ಕೋಡಿ, ನೀಲಾವರ, ಚೇರ್ಕಾಡಿ, ವಡ್ದರ್ಸೆ, ಹಾನೆಹಳ್ಳಿ, ಬಳ್ಕೂರು, ಕಂದಾವರ, ಹುತ್ತೂರು, ಅಂಜಾರು ಇತ್ಯಾದಿ ಗ್ರಾಮಗಳಲ್ಲಿ ಆಸ್ತಿ ಹೊಂದಿರುವುದಾಗಿ ಹೇಳಲಾಗಿದೆ. ಅಲ್ಲದೆ, ಅನೇಕ ಶಿಷ್ಯರು ಹಾಗೂ ಭಕ್ತರು ಇತ್ತೀಚೆಗೆ ಅಪಾರ ಆಸ್ತಿ ಸಂಪತ್ತನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ಒಪ್ಪಿಸಿದ್ದಾರೆ. ಅದರ ಮೇಲೆ ಕಣ್ಣಿಟ್ಟಿರುವ ಕೆಲವರು ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅನಾರೋಗ್ಯದಿಂದಿರುವ ಅವಕಾಶವನ್ನೇ ಬಳಸಿಕೊಂಡು ಶ್ರೀಮಠಕ್ಕೆ ಅರ್ಹತೆ, ವಿದ್ವತ್ತು ಇಲ್ಲದ, ಮಠದ ಸಂಪ್ರದಾಯಕ್ಕೆ ಸಲ್ಲದ ವ್ಯಕ್ತಿಯೋರ್ವರನ್ನು ಉತ್ತರಾಧಿಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಶಿವರಾಮ ಉಡುಪ ಆರೋಪಿಸಿದರು.
ಸಮಿತಿ ಅಧ್ಯಕ್ಷ ಜ್ಯೋತಿಷಿ ಹೃಷಿಕೇಶ ಬಾಯಿರಿ, ಕಾರ್ಯದರ್ಶಿ ಮಂಜುನಾಥ ಭಟ್, ಸದಸ್ಯರಾದ ಸತೀಶ ಅಡಿಗ ಮತ್ತು ಮಾಬುಕಳ ಗೋಪಾಲಕೃಷ್ಣ ಅಡಿಗ ಸುದ್ದಿಗೋಷ್ಟಿಯಲ್ಲಿದ್ದರು.
.jpg)
.jpg)
.jpg)
.jpg)
.jpg)
.jpg)