ಲೋಕಬಂಧು ನ್ಯೂಸ್ | ಉಡುಪಿ, ಸೆ.19
ಸಾಮಾಜಿಕ ಮಾಧ್ಯಮಗಳಲ್ಲಿ ಒಳಿತಿನ ಜೊತೆಗೆ ಕೆಡುಕುಗಳೂ ಹೆಚ್ಚುತ್ತಿದ್ದು ತಪ್ಪು ಮಾಹಿತಿ, ದ್ವೇಷಪೂರಿತ ಹೇಳಿಕೆಗಳಿಂದ ಸಮುದಾಯಗಳ ನಡುವಿನ ಬಾಂಧವ್ಯವೂ ಹದಗೆಡುತ್ತಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಹೆಚ್ಚು ಜಾಗೃತರಾಗಬೇಕು. ಈ ಬಗ್ಗೆ ಹಿರಿಯರ ಮಾರ್ಗದರ್ಶನವೂ ಅಗತ್ಯವಿದೆ ಎಂದು ಸ್ವರ್ಣೋದ್ಯಮಿ, ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್‌ನ ನಿರ್ದೇಶಕ ಗುಜ್ಜಾಡಿ ರಾಮದಾಸ್ ನಾಯಕ್ ಹೇಳಿದರು.
ಕಡಿಯಾಳಿ ಕಾತ್ಯಾಯನೀ ಮಂಟಪದಲ್ಲಿ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 60ನೇ ವರ್ಷದ ಗಣೇಶೋತ್ಸವ ಅಂಗವಾಗಿ ಗುಜ್ಜಾಡಿ ನರಸಿಂಹ ನಾಯಕ್ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಲಾದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಹಿರಿಯರು ಹಾಕಿದ ಸಂಸ್ಕಾರದ ಪ್ರತಿಫಲವೆಂಬಂತೆ ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದೆ. ಗಣಪತಿಯನ್ನು ಅತ್ಯಂತ ಗೌರವದಿಂದ ಪೂಜಿಸಲಾಗುತ್ತಿದ್ದು, ಭಕ್ತಿ ಭಾವದಿಂದ ಪೂಜಿಸಿದರೆ ನಮ್ಮೆಲ್ಲ ಇಷ್ಟಾರ್ಥಗಳು ಈಡೇರುತ್ತದೆ ಎಂದರು.
ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್ ಸ್ವಾಗತಿಸಿದರು. ವಜ್ರಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮತ್ಯೋದ್ಯಮಿ ಸಾಧು ಸಾಲಿಯಾನ್, ಉದ್ಯಮಿ ಭಾಸ್ಕರ್ ಶೇರಿಗಾರ್, ವಜ್ರಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ.ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.
ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮತ್ತು ಸರಿತಾ ಕಾರ್ಯಕ್ರಮ ನಿರೂಪಿಸಿದರು.
