ಲೋಕಬಂಧು ನ್ಯೂಸ್ | ಉಡುಪಿ, ಸೆ.16
ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಗೆ ಮಾನ್ಯತೆ ನೀಡುವ ಕುರಿತು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಎಂದು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿ'ಸೋಜಾ ಆಗ್ರಹಿಸಿದರು.
ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡುವಂತೆ ವೇದಿಕೆ ವತಿಯಿಂದ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಪ್ರಧಾನಿ ಹಾಗೂ ಮುಖ್ಯಮಂತ್ರಿಗೂ ಮನವಿ ಸಲ್ಲಿಸಲಾಗಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಭರವಸೆ ನೀಡಿತ್ತು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಈ ಬೇಡಿಕೆ ಈಡೇರಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ತುಳು ಭಾಷೆ ಯಕ್ಷಗಾನ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ವಿವಿಧ ಆಚರಣೆಗಳ ಮೂಲಕ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಂಥ ಪ್ರಾಚೀನ ಹಾಗೂ ಸಾಂಸ್ಕೃತಿಕವಾಗಿ ಮಹತ್ವವುಳ್ಳ ಭಾಷೆಗೆ ಸೂಕ್ತ ಸ್ಥಾನಮಾನ ದೊರೆಯದೇ ಇರುವುದು ವಿಷಾದನೀಯ ಎಂದು ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದರು.
ಈ ಹಿನ್ನೆಲೆಯಲ್ಲಿ ಸೆ.18ರಂದು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಯೋಗೀಶ್ ಶೆಟ್ಟಿ ಜೆಪ್ಪು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಜಿಲ್ಲಾ ಮಹಿಳಾಧ್ಯಕ್ಷೆ ನಾಗಲಕ್ಷ್ಮಿ, ನಗರ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಶರತ್ ರಾಜ್ ಆರೂರು, ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಅನಸೂಯಾ ಶೆಟ್ಟಿ ಬೈರಂಪಳ್ಳಿ, ಅಧ್ಯಕ್ಷ ಕೃಷ್ಣಾನಂದ ನಾಯಕ್, ಉಪಾಧ್ಯಕ್ಷ ಗುಣಕರ್ ಹಾಲಕ್ಕಿ, ಉಡುಪಿ ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕೃಷ್ಣ ಮಾರ್ಪಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪವಿತ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ವನಿತಾ ಆಚಾರ್ಯ, ಜಿಲ್ಲಾ ಮಹಿಳಾ ಜೊತೆ ಕಾರ್ಯದರ್ಶಿ ಮಂಜುಳ, ಮುಖಂಡರಾದ ಶಂಕರ್, ಉದಯ ಮೊದಲಾದವರಿದ್ದರು.