ಲೋಕಬಂಧು ನ್ಯೂಸ್ ಕುಂದಾಪುರ, ಸೆ.14
ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಹಾಗೂ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಎತ್ತಿನಹಳ್ಳಿ ಪುಣೆದಹಳ್ಳಿ ಗ್ರಾಮದ ರಾಕೇಶ್ ಎಚ್. (28) ಮತ್ತು ಜಕ್ಕೆನಹಳ್ಳಿ ಗ್ರಾಮದ ಕಾಲೇಕೆರೆ ನಿವಾಸಿ ನಂದೀಶ ಎಂ. (24) ಬಂಧಿತರು.
ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು, ನೆಲ್ಲಿಗದ್ದೆ ಎಂಬಲ್ಲಿನ ಮನೆಯೊಂದರಲ್ಲಿ ಸೆ.4ರಂದು ಮನೆಯವರು ಫ್ಯಾಕ್ಟರಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಪರಾಹ್ನ 2.30ರಿಂದ 3.10ರ ನಡುವೆ ಕಳ್ಳತನ ನಡೆದಿತ್ತು. ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 97 ಸಾವಿರ ನಗದು ಎಗರಿಸಿದ್ದರು. ಆ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಳ್ಳುಂಜೆ ಗ್ರಾಮದ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ಸುಮಾರು 40 ಸಾವಿರ ಹಣವನ್ನು ಕಳವು ಮಾಡಲಾಗಿತ್ತು. ಆ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎರಡೂ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಣಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸ್‌ಐ ಭೀಮಾಶಂಕರ್ ಸಿನ್ನೂರ್, ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸ್‌ಐ (ಕಾ.ಸು.) ಯೂನಸ್ ಗಡೈಕರ್ ಹಾಗೂ ಅಮಾಸೆಬೈಲು ಠಾಣೆಯ ಪಿಎಸ್‌ಐ (ತನಿಖೆ) ಸುಧಾರಾಣಿ ಟಿ. ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಹುಲಿಕಲ್ ಘಾಟ್ ಸಮೀಪ ಆರೋಪಿಗಳನ್ನು ಬಂಧಿಸಿ, ಅವರಿಂದ 1,19,720 ನಗದು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಎಎಸ್‌ಐ ಚಂದ್ರಶೇಖರ ಶೆಟ್ಟಿ, ಹೆಡ್ ಕಾನ್‌ಸ್ಟೆಬಲ್ ರಾಘವೇಂದ್ರ, ಸಿಎಚ್‌ಸಿ ನವೀನ್ ಕುಮಾರ್, ಹೆಡ್ ಕಾನ್‌ಸ್ಟೆಬಲ್ ಸುಧಾಕರ, ಪೊಲೀಸ್ ಕಾನ್‌ಸ್ಟೆಬಲ್ ದಿನೇಶ್, ಸಿಎಚ್‌ಸಿ ಸಚಿನ್ ಕುಲಾಲ್, ಪೊಲೀಸ್ ಕಾನ್‌ಸ್ಟೆಬಲ್ ಮಂಜುನಾಥ, ಜಯರಾಮ ನಾಯ್ಕ ಹಾಗೂ ಚೇತನ್ ಕುಮಾರ್ ಭಾಗವಹಿಸಿದ್ದರು.